ಪುತ್ತೂರು: ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಕಚೇರಿಯಲ್ಲಿ ಮತ್ತೊಂದು ವಿಶಿಷ್ಟ ಹಾಗೂ ಮಾದರಿ ಜನಪರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕಚೇರಿಗೆ ಬರುವ ಸಾರ್ವಜನಿಕರಿಗಾಗಿ ಮಧ್ಯಾಹ್ನ ಕರಾವಳಿಯ ಸಾಂಪ್ರದಾಯಿಕ ‘ಗಂಜಿ ಊಟ’ದ ವ್ಯವಸ್ಥೆಯನ್ನು ಇಂದಿನಿಂದ ಆರಂಭಿಸಲಾಗಿದೆ.

ಪ್ರತೀ ಸೋಮವಾರದಂದು ಪುತ್ತೂರಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಜನಸ್ಪಂದನ ಕಾರ್ಯಕ್ರಮ ನಡೆಯುತ್ತದೆ. ಈ ವೇಳೆ ತಾಲೂಕಿನ ಗ್ರಾಮೀಣ ಭಾಗಗಳು ಹಾಗೂ ಮೂಲೆ ಮೂಲೆಗಳಿಂದ ಬಡವರು, ಕಾರ್ಮಿಕರು ಸೇರಿದಂತೆ ನೂರಾರು ಜನ ಆಗಮಿಸುತ್ತಾರೆ. ಅರ್ಜಿ ಸಲ್ಲಿಸಿ, ಶಾಸಕರನ್ನು ಭೇಟಿಯಾಗಿ ಹೋಗುವಷ್ಟರಲ್ಲಿ ಮಧ್ಯಾಹ್ನವಾಗುವುದರಿಂದ, ಕಚೇರಿಗೆ ಬರುವ ಯಾರೂ ಹಸಿದ ಹೊಟ್ಟೆಯಲ್ಲಿ ಮರಳಬಾರದು ಎಂದು ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಗಂಜಿ, ಚಟ್ನಿ, ಉಪ್ಪಿನಕಾಯಿ ಸವಿದ ಸಾರ್ವಜನಿಕರು
ಇನ್ಮುಂದೆ ಕಚೇರಿಗೆ ಬರುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಮಧ್ಯಾಹ್ನದ ವೇಳೆ ಬಿಸಿ ಬಿಸಿ ಕುಚ್ಚಲಕ್ಕಿ ಗಂಜಿ, ಚಟ್ನಿ ಹಾಗೂ ಉಪ್ಪಿನಕಾಯಿಯ ಸರಳ ಮತ್ತು ಸಾತ್ತ್ವಿಕ ಆಹಾರದ ವ್ಯವಸ್ಥೆ ಇರಲಿದೆ. ಕಚೇರಿಗೆ ಬಂದ ಸಾರ್ವಜನಿಕರು ಶಾಸಕರ ಕಚೇರಿಯ ಈ ಅತಿಥ್ಯವನ್ನು ಸ್ವೀಕರಿಸಿ, ಶಾಸಕರ ಜನಸ್ನೇಹಿ ಕಾಳಜಿಗೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜನಪ್ರತಿನಿಧಿಯೊಬ್ಬರ ಕಚೇರಿಯಲ್ಲಿ ಕರಾವಳಿಯ ಸಾಂಪ್ರದಾಯಿಕ ಶೈಲಿಯ ಈ ಅಪರೂಪದ ವ್ಯವಸ್ಥೆ ಆರಂಭವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.


