ಮಂಗಳೂರು: ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಕ್ಷೇತ್ರ, ಉದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಜಗತ್ತಿನಾದ್ಯಂತ ಹೆಸರಾಗಿರುವ ಕರಾವಳಿಯ ಹೆಮ್ಮೆಯ ನಗರಿ ಮಂಗಳೂರು. ಸದ್ಯ ‘ಸ್ಮಾರ್ಟ್ ಸಿಟಿ’ಯಾಗಿ ರೂಪುಗೊಳ್ಳುತ್ತಿರುವ ಈ ಸುಂದರ ನಗರದ ಸೌಂದರ್ಯಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಕೆಲವು ಖಾಸಗಿ ಕಂಪನಿಗಳ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ (Footpaths) ಎಗ್ಗಿಲ್ಲದೆ ನೇತಾಡುತ್ತಿರುವ ವಿವಿಧ ಕಂಪನಿಗಳ ಇಂಟರ್ನೆಟ್ ಹಾಗೂ ಟೆಲಿಕಾಂ ಕೇಬಲ್‌ಗಳು ಸಾರ್ವಜನಿಕರ ಪಾಲಿಗೆ ಸಾವಿನ ಬಲೆಯಾಗಿ ಮಾರ್ಪಟ್ಟಿವೆ.
ಗಿಡ-ಮರಗಳ ಬೇರುಗಳಂತೆ ನೇತಾಡುವ ವೈಯರ್‌ಗಳು! ನಗರದ ವಿದ್ಯುತ್ ಕಂಬಗಳಿಗೆ ವಿವಿಧ ಕಂಪನಿಗಳು ಯಾವುದೇ ನಿಯಮ ಪಾಲಿಸದೆ ಮನಸೋಇಚ್ಛೆ ಕೇಬಲ್‌ಗಳನ್ನು ಎಳೆದಿದ್ದಾರೆ. ಹಲವು ಕಡೆಗಳಲ್ಲಿ ಈ ಕೇಬಲ್‌ಗಳು ಪಾದಚಾರಿಗಳು ನಡೆದುಕೊಂಡು ಹೋಗುವ ದಾರಿಯಲ್ಲೇ ಗಿಡ-ಮರಗಳ ಬೇರು ಮತ್ತು ಬಳ್ಳಿಗಳಂತೆ ಅಡ್ಡಾದಿಡ್ಡಿಯಾಗಿ ನೇತಾಡುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ಕೇಬಲ್‌ಗಳು ತುಂಡಾಗಿ ರಸ್ತೆಯಲ್ಲೇ ಬಿದ್ದಿದ್ದು, ಕಣ್ಣಿಗೆ ಕಾಣದಂತೆ ಹರಡಿಕೊಂಡಿವೆ.
ದಿನನಿತ್ಯ ಸಾವಿರಾರು ಜನರು, ವೃದ್ಧರು ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಡುವ ಈ ರಸ್ತೆಗಳಲ್ಲಿ ಸಿಕ್ಕಿಬಿದ್ದು ಹಲವರು ಈಗಾಗಲೇ ಗಾಯಗೊಂಡಿದ್ದಾರೆ. ಕತ್ತಲೆಯ ಸಮಯದಲ್ಲಿ ಈ ಕೇಬಲ್‌ಗಳು ಕಾಣಿಸದೆ ಪಾದಚಾರಿಗಳು ಮುಗ್ಗರಿಸಿ ಬೀಳುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. “ಸ್ಮಾರ್ಟ್ ಸಿಟಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ದಿನನಿತ್ಯದ ಈ ಅಪಾಯವನ್ನು ಕಣ್ಣಿಟ್ಟು ನೋಡುತ್ತಿಲ್ಲವೇ?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನುಮತಿ ಕೊಟ್ಟ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೇ? ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಇಂತಹ ಕಂಪನಿಗಳಿಗೆ ಇಲಾಖೆಗಳು ಹೇಗೆ ಅನುಮತಿ ನೀಡುತ್ತವೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಸಂಬಂಧಪಟ್ಟ ಇಲಾಖೆಯ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಗರದ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಸುರಕ್ಷತೆಗಾಗಿ ತಕ್ಷಣವೇ ಎಲ್ಲಾ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯ ನಿಯಮದಂತೆ ಎಲ್ಲಾ ಕೇಬಲ್‌ಗಳನ್ನು ಕಡ್ಡಾಯವಾಗಿ ಭೂಗತ ಡಕ್ಟ್‌ಗಳ ಮೂಲಕವೇ ಕೊಂಡೊಯ್ಯಲು ಅಧಿಕಾರಿಗಳು ಕಠಿಣ ಕಾನೂನು ಜಾರಿಗೆ ತರಬೇಕು. ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ಕಂಪನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಇನ್ನಾದರೂ ಮಂಗಳೂರು ಮಹಾನವರ ಪಾಲಿಕೆ (MCC), ಮೆಸ್ಕಾಂ ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ‘ಕೇಬಲ್ ಜಾಲ’ದಿಂದ ಮಂಗಳೂರು ನಗರಕ್ಕೆ ಮುಕ್ತಿ ನೀಡಬೇಕಾಗಿದೆ.







