ಮಂಗಳೂರು:ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು (ಅಮ್ಮ) ಸುದೀರ್ಘ 7 ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು.ವರ್ಷಗಳ ಬಳಿಕ ಇದೇ ಮೇ 28 ಮತ್ತು 29 ರಂದು ಮಂಗಳೂರಿಗೆ ಆಗಮಿಸಲಿದ್ದು, ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ‘ಜೀವನೋಲ್ಲಾಸದ ಸಂಭ್ರಮಾಚರಣೆ’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವ ನಡೆಯಲಿದೆ.ಎಂದು ಅಧ್ಯಕ್ಷರಾದ ಸುರೇಶ್ ಅಮೀನ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಮಂಗಳೂರಿನ ಭಕ್ತರ ಮೇಲೆ ಅಪಾರ ಮಮತೆ ಹೊಂದಿರುವ ಅಮ್ಮನವರು, ಈ ಬಾರಿ ಕೇರಳ ರಾಜ್ಯದ ಹೊರಗೆ ಭೇಟಿ ನೀಡುತ್ತಿರುವುದು ಕರ್ನಾಟಕದ ಮಂಗಳೂರಿಗೆ ಮಾತ್ರ ಎಂಬುದು ಇಲ್ಲಿನ ಭಕ್ತರ ಸೌಭಾಗ್ಯವಾಗಿದೆ. ಅಮ್ಮನವರನ್ನು ಭವ್ಯವಾಗಿ ಸ್ವಾಗತಿಸಲು ಭಕ್ತರು ಮತ್ತು ಆಯೋಜಕರು ಸಕಲ ಪೂರ್ವಸಿದ್ಧತೆಗಳನ್ನು ಕೈಗೊಂಡಿದ್ದಾರೆ.

25ನೇ ವರ್ಷದ ಸಂಭ್ರಮ ಹಾಗೂ ಸಮಾಜಮುಖಿ ಯೋಜನೆಗಳು: ಈ ಬಾರಿಯ ಕಾರ್ಯಕ್ರಮವು 25ನೇ ವರ್ಷದ ರಜತ ಮಹೋತ್ಸವದ ಸಂಭ್ರಮವನ್ನು ಒಳಗೊಂಡಿದೆ. ಈ ವಿಶೇಷ ಸಂದರ್ಭದಲ್ಲಿ ಅಮ್ಮನವರಿಗೆ ಅತ್ಯಂತ ಪ್ರಿಯವಾದ ಹಲವು ಸಮಾಜಮುಖಿ ಮತ್ತು ಮಾನವೀಯ ಸೇವಾ ಯೋಜನೆಗಳಿಗೆ ಅವರ ಹಸ್ತದಿಂದಲೇ ಚಾಲನೆ ದೊರಕಿಸಿಕೊಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಾತಿ, ಮತ, ಧರ್ಮ ಅಥವಾ ವರ್ಣದ ಭೇದವಿಲ್ಲದೆ ಎಲ್ಲರ ಭಾವನೆಗಳಿಗೂ ಸ್ಪಂದಿಸುತ್ತಾ, ಲೋಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಮ್ಮನವರ ದರ್ಶನ ಪಡೆಯಲು ಕರಾವಳಿಯಾದ್ಯಂತ ಲಕ್ಷಾಂತರ ಭಕ್ತರು ಉತ್ಸುಕರಾಗಿದ್ದಾರೆ.

ಎರಡು ದಿನಗಳ ವಿವಿಧ ಕಾರ್ಯಕ್ರಮಗಳು: ಸಾರ್ವಜನಿಕರ ಮತ್ತು ಭಕ್ತರ ಅನುಕೂಲಕ್ಕಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಎರಡು ದಿನಗಳ ಕಾಲ ಬೆಳಗ್ಗಿನಿಂದ ರಾತ್ರಿಯ ತನಕ ವೈವಿಧ್ಯಮಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನ, ಭಜನೆ ಮತ್ತು ಸಾಮೂಹಿಕ ಪ್ರಾರ್ಥನೆಗಳು ಜರುಗಲಿವೆ.

ವಿಶೇಷ ಲೇಖನ ಯಜ್ಞ:ಅಮ್ಮನವರ ಮಂಗಳೂರು ಭೇಟಿಯ ಅಂಗವಾಗಿ ಲೋಕ ಕಲ್ಯಾಣ ಮತ್ತು ಭಕ್ತಿಭಾವದ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ “ಓಂ ಶಿವ ಶಕ್ತ್ಯೈಕ್ಯ ರೂಪಿಣ್ಯೈ ನಮಃ” ಎಂಬ ಮಂತ್ರದ ವಿಶೇಷ ಲೇಖನ ಯಜ್ಞವನ್ನು ಆಯೋಜಿಸಲಾಗಿದೆ. ಈ ವಿಶಿಷ್ಟ ಲೇಖನ ಯಜ್ಞಕ್ಕೆ ಭಕ್ತ ವಲಯದಿಂದ ಈಗಾಗಲೇ ಅತ್ಯಂತ ರಂಜನೀಯ ಮತ್ತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

ದಿನಾಂಕ 28 ರಂದು ಬೆಳಗ್ಗೆ 10.30 ಕ್ಕೆ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ.
ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಅಮೃತಸಂಗಮ 2026 ಸಭಾ ಕಾರ್ಯಕ್ರಮವು ಗಣ್ಯರ ಸಮಾಗಮದಲ್ಲಿ ಜರುಗಲಿರುವುದು. ಭಾರತ ಸರಕಾರದ ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ ಹಾಗೂ ಭಾರತ ಸರಕಾರದ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವರು ಮತ್ತು ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಶ್ರೀ ಯು. ಟಿ.ಖಾದರ್ ಫರೀದ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಸದಸ್ಯ ಶ್ರೀ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೇಶ್ ಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿರುವರು.

ದರ್ಶನ ಟೋಕನ್ ವ್ಯವಸ್ಥೆ:
ಅಮ್ಮನವರ ದರ್ಶನವನ್ನು ಪಡೆಯಲು ಬಯಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟೋಕನ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ 9.30 ರ ಒಳಗೆ ಬಂದು ಕುಳಿತವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ. ಜನರು ಬಂದ ಸಮಯಕ್ಕೆ ಅನುಗುಣವಾಗಿ ಟೈಮ್ ಕಾರ್ಡ್ ಸಂಖ್ಯೆಗಳಿದ್ದು ಅದಕ್ಕೆ ತಕ್ಕಂತೆ ಆನಂತರ ದರ್ಶನ ಟೋಕನ್ ನೀಡಲಾಗುತ್ತದೆ.
ಅಮ್ಮನವರ ಸತ್ಸಂಗ, ಧ್ಯಾನ, ಭಜನೆಯ ನಂತರ ಅಮ್ಮನವರು ದರ್ಶನ ಟೋಕನ್ ನ ಸರದಿಯಂತೆ ಟೋಕನ್ ಹೊಂದಿರುವ ಪ್ರತಿಯೊಬ್ಬರಿಗೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಅನುಗ್ರಹ ದರ್ಶನ ನೀಡಲಿರುವರು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಡಾ ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್ , ಡಾ. ವಸಂತಕುಮಾರ ಪೆರ್ಲ ಮುಂತಾದವರು ಕಾರ್ಯಕ್ರಮದ ಕುರಿತು ಪೂರಕ ಮಾಹಿತಿಗಳನ್ನು ನೀಡಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವೈದ್ಯಕೀಯ ಪ್ರಕೋಷ್ಠದ ಮುಖ್ಯಸ್ಥರಾದ ಡಾ.ದೇವದಾಸ್ ಪುತ್ರನ್ ಸ್ವಾಗತಿಸಿದರು. ಅಮೃತಸಂಗಮ ಆಯೋಜನಾ ಸಮಿತಿಯ ಕಾರ್ಯದರ್ಶಿ C A ರಾಮನಾಥ್ ವಂದಿಸಿದರು.

