canaratvnews

ಬೊಂದೆಲ್ ಸಂತ ಲಾರೆನ್ಸ್ ಶಾಲೆಯಲ್ಲಿ ನವೀಕೃತ ಸಭಾಂಗಣ ಉದ್ಘಾಟನೆ: ‘ರೆಸೊನನ್ಸ್–2026’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ಮಂಗಳೂರು: ಬೊಂದೆಲ್‌ನ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ‘ರೆಸೊನನ್ಸ್– 2026’ ಸಾಂಸ್ಕೃತಿಕ ಹಬ್ಬಕ್ಕೆ ಅತ್ಯಂತ ಸಡಗರದಿಂದ ಚಾಲನೆ ನೀಡಲಾಯಿತು.

ಕರ್ನಾಟಕದ ನಿವೃತ್ತ ಶಿಕ್ಷಣ ನಿರ್ದೇಶಕರಾದ ಡಾ. ಸಿಪ್ರಿಯಾನ್ ಮೊಂತೆರೊ ಅವರು ರಿಬ್ಬನ್ ಕತ್ತರಿಸುವ ಮೂಲಕ ನವೀಕೃತ ಸಭಾಂಗಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಇದೇ ವೇಳೆ ‘ರೆಸೊನನ್ಸ್–2026’ರ ಮುಖ್ಯ ಅತಿಥಿ, ಭರತನಾಟ್ಯ ಕಲಾವಿದೆ ಕುಮಾರಿ ರೆಮೋನಾ ಎವಿಯೆಟ್ ಪಿರೇರಾ ಅವರು ಬ್ಯಾನರ್ ಬಿಡುಗಡೆ ಮಾಡಿ ಸಾಂಸ್ಕೃತಿಕ ಹಬ್ಬಕ್ಕೆ ಭವ್ಯ ಚಾಲನೆ ನೀಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ವಂದನೀಯ ಫಾ. ಬೆಸಿಲ್ ವಾಸ್ ಅವರು ನವೀಕೃತ ಸಭಾಂಗಣವನ್ನು ಆಶೀರ್ವದಿಸಿದರು.

ರೆಮೋನಾ ಪಿರೇರಾ ಭರತನಾಟ್ಯ ಕ್ಷೇತ್ರದಲ್ಲಿನ ಅಸಾಧಾರಣ ಸಾಧನೆಗಾಗಿ ಕುಮಾರಿ ರೆಮೋನಾ ಎವಿಯೆಟ್ ಪೆರೇರಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ಕಾಣಬೇಕು. ನಿಮ್ಮ ವಿಭಿನ್ನ ಆಲೋಚನೆಗಳನ್ನು ಎಂದಿಗೂ ಕೈಬಿಡಬೇಡಿ ಮತ್ತು ಸಾಧನೆಯ ಹಾದಿಯಲ್ಲಿ ಹಾವಿಡಲು ಹಿಂಜರಿಯಬೇಡಿ” ಎಂದು ಪ್ರೇರೇಪಿಸಿದರು. ಸನ್ಮಾನದ ನಂತರ ಅವರು ನೀಡಿದ ಅದ್ಭುತ ಭರತನಾಟ್ಯ ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು.

ಡಾ. ಸಿಪ್ರಿಯಾನ್ಶಿಕ್ಷಣ ಕ್ಷೇತ್ರದ ಗಣನೀಯ ಸಾಧನೆ ಗಾಗಿ ಡಾ. ಸಿಪ್ರಿಯಾನ್ ಮೊಂತೆರೊ ಅವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಸುಪ್ತ ಸಾಮರ್ಥ್ಯವನ್ನು ಸಾಕಾರಗೊಳಿಸಬೇಕು” ಎಂದು ಕರೆ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಫಾ. ಬೆಸಿಲ್ ವಾಸ್ ಅವರು, ವಿದ್ಯಾರ್ಥಿಗಳು ಸಾಧಕರ ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದರು. ಸಭಾಂಗಣದ ನವೀಕರಣಕ್ಕಾಗಿ ₹10 ಲಕ್ಷದ ಬೃಹತ್ ದೇಣಿಗೆ ನೀಡಿದ ಶ್ರೀ ಮೈಕಲ್ ಡಿಸೋಜಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಹಾಗೆಯೇ ಯೋಜನೆಗೆ ಮುನ್ನುಡಿ ಬರೆದ ಮಾಜಿ ಜಂಟಿ ಕಾರ್ಯದರ್ಶಿ ಫಾ. ಆಂಡ್ರ್ಯೂ ಲಿಯೋ ಡಿಸೋಜಾ ಅವರನ್ನು ಸ್ಮರಿಸಿ, ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಾಂಶುಪಾಲ ಫಾ. ಪೀಟರ್ ಗೊನ್ಸಲ್ವಿಸ್ ಅವರನ್ನು ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಸಭಾಂಗಣದ ಸೌಂದರ್ಯೀಕರಣಕ್ಕೆ ಶ್ರಮಿಸಿದ ಶ್ರೀ ನವೀನ್ ಪ್ರಕಾಶ್ ವಾಸ್ (ಸೀಲಿಂಗ್ ಮತ್ತು ಒಳಾಂಗಣ), ಶ್ರೀ ರವಿ ಎಫ್. ಸಾಲ್ದಾನ್ಹಾ (AC ಅಳವಡಿಕೆ), ಹಾಗೂ ಶ್ರೀ ದೀಪಕ್ ಮತ್ತು ಶ್ರೀ ಮಿಥುನ್ (ವಿದ್ಯುತ್ ತಾಂತ್ರಿಕ ಕೆಲಸ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರ್ಣರಂಜಿತ ಸಾಂಸ್ಕೃತಿಕ ಸ್ಪರ್ಧೆಗಳುಜುಲೈ 30 ಮತ್ತು 31ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ಹಬ್ಬಕ್ಕೆ ಭರತನಾಟ್ಯ ಸ್ಪರ್ಧೆಯೊಂದಿಗೆ ವಿಧ್ಯುಕ್ತ ಚಾಲನೆ ದೊರೆಯಿತು. ಸಮಾರಂಭದಲ್ಲಿ ವೇದಿಕೆಯ ಮೇಲೆ ಫಾ. ಲಾರೆನ್ಸ್ ಕುಟಿನ್ಹಾ, ಶ್ರೀ ಜಾನ್ ಡಿಸಿಲ್ವಾ, ಶ್ರೀ ಮನೀಶ್ ಸಂತೋಷ್ ಮಸ್ಕರೇನ್ಹಸ್, ಶ್ರೀಮತಿ ಹೆಲೆನ್ ಮೇರಿ ಫೆರ್ನಾಂಡಿಸ್ ಹಾಗೂ ಕುಮಾರಿ ಮರಿಯಾ ಡಿಸಿಲ್ವಾ ಉಪಸ್ಥಿತರಿದ್ದರು. ಕಾರ್ಯಕ್ರಮವು ಅತ್ಯಂತ ವರ್ಣರಂಜಿತ ಮೂಡಿಬಂತು.

Share News
Exit mobile version