canaratvnews

ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ: ಬಿಜೆಪಿ ನಾಯಕನ ಮನೆಗೆ ಬೆಂಕಿ

ಇಂಫಾಲ್‌: ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲಿಸಿದ ಆರೋಪದ ಮೇಲೆ, ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷನ ಮನೆಗೆ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ.

ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅಸ್ಕರ್‌ ಅಲಿ ಮನೆಗೆ ಗುಂಪೊಂದು ಭಾನುವಾರ ರಾತ್ರಿ ದಾಳಿ ಮಾಡಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯು ಥೌಬಾಲ್‌ ಜಿಲ್ಲೆಯ ಲಿಲೊಂಗ್ ಎಂಬಲ್ಲಿ ನಡೆದಿದೆ.

ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ ಅಸ್ಕರ್‌ ಅಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಪೋಸ್ಟ್‌ ಮಾಡಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗುಂಪು, ರಾತ್ರಿ 9ರ ವೇಳೆಗೆ ಅವರ ನಿವಾಸದ ಮುಂದೆ ಜಮಾಯಿಸಿತ್ತು.

ನಿವಾಸವನ್ನು ಧ್ವಂಸಗೊಳಿಸಿದ್ದಲ್ಲದೇ, ಬೆಂಕಿ ಹಚ್ಚಿತು ಎಂದು ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ, ಕ್ಷಮೆ ಕೋರಿರುವ ಅಲಿ, ಮಸೂದೆಗೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Share News
Exit mobile version