DAKSHINA KANNADAHOMELATEST NEWSSTATE

ಬೆಳ್ತಂಗಡಿ: ವಿದ್ಯಾರ್ಥಿನಿ ಕಿಡ್ನ್ಯಾಪ್​​ ಕೇಸ್​​ಗೆ ಬಿಗ್​​ ಟ್ವಿಸ್ಟ್- ಹೆತ್ತವರ ಮೇಲೆಯೇ ಕೇಸ್‌….!

ಬೆಳ್ತಂಗಡಿ: ಫೆ.9 ರಂದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಕಿಡ್ನಾಪ್‌ ಪ್ರಕರಣವೊಂದು ಒಂದೇ ದಿನದಲ್ಲಿ ಟ್ವಿಸ್ಟ್‌ ನೀಡಿದ್ದು, ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಜೊತೆಗೆ ಅಪ್ರಾಪ್ತೆಗೆ ವಾಹನ ಚಲಾಯಿಸಲು ಕೊಟ್ಟಿದ್ದಕ್ಕೆ ಹೆತ್ತವರ ಮೇಲೆಯೇ ಕೇಸ್‌ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಫೆ.9 ರಂದು ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಮೂವರು ಮುಸುಕುಧಾರಿಗಳು ಓಮಿನಿ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದಾಗ ಆಕೆಯ ಕೈಗೆ  ಚೂರಿ ಇರಿದು ಪರಾರಿಯಾಗಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಘಟನೆಯಲ್ಲಿ ಗಾಯಗೊಂಡಿದ್ದರಿಂದ ಆಕೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ನಂತರ ಪೊಲೀಸರಿಗೆ ದೂರು ನೀಡಿದ್ದಳು.

ಘಟನೆಯಿಂದ ಎಚ್ಚೆತ್ತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದ್ದರು. ಜೊತೆಗೆ ಸ್ಥಳೀಯರನ್ನು ವಿಚಾರಿಸಿದಾಗ ಪೂರಕ ಮಾಹಿತಿ ದೊರಕದ ಹಿನ್ನೆಲೆ ಮತ್ತೆ ವಿದ್ಯಾರ್ಥಿನಿಯನ್ನು ತನಿಖೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ವಿದ್ಯಾರ್ಥಿನಿ ಕಾಲೇಜಿಗೆ ತೆರಳಲು ಇಷ್ಟವಿಲ್ಲದ ಕಾರಣ ಆಕೆಯೇ ಕಿಡ್ನ್ಯಾಪ್ ಯತ್ನದ ಡ್ರಾಮ ಮಾಡಿರುವುದಾಗಿ ಪೊಲೀಸರಿಗೆ ಗೊತ್ತಾಗಿದೆ. ಕಿಡ್ನ್ಯಾಪ್​​ ನಾಟಕ ಮಾಡಿದ್ರೆ ತನ್ನನ್ನು ಮನೆಯವರು ಮಂಗಳೂರಿ‌ನ ಕಾಲೇಜಿಗೆ ಸೇರಿಸುತ್ತಾರೆ ಎಂದುಕೊಂಡಿದ್ದ ಯುವತಿ ಅದಕ್ಕೆ ತಕ್ಕಂತೆ ಭರ್ಜರಿ ಪ್ಲ್ಯಾನ್​​ ಕೂಡ ಮಾಡಿದ್ದಳು. ಬ್ಲೇಡ್​​ನಲ್ಲಿ ತಾನೇ ಕೈ ಕೊಯ್ದುಕೊಂಡು ಕತೆ ಹೇಳಿದ್ದಳು.  ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.

ಪೊಲೀಸರ ಸ್ಪಷನೆ

ಈ ಬಗ್ಗೆ ದ.ಕ ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ CCTV ದೃಶ್ಯಗಳನ್ನು ಪರಿಶೀಲಿಸಿದ ಬಳಿಕ, ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ.

ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟುಮಾಡಿಕೊಂಡ ಗಾಯ (Self inflicted wound) ಎಂದು ತಿಳಿಸಲಾಗಿದೆ. ನಂತರ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲಾಗಿದ್ದು, ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿದ್ದೆನೆಂದು ತಿಳಿಸಿದ್ದಾರೆ. ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಸದ್ರಿ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು. ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಧೃಡಪಡಿಸಿದ್ದಾರೆ.

Share News