ಮಂಗಳೂರು: ಉಡುಪಿಯಲ್ಲಿ ನಡೆದ ಕ್ರಿಶ್ಚಿಯನ್ ಯುವತಿ ಮತ್ತು ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಇದೀಗ ಹಿಂದೂ ಸಂಘಟನೆಗಳು ಎಂಟ್ರಿ ನೀಡಿವೆ. ಈ ಹೋರಾಟಕ್ಕೆ ಧುಮುಕಿದ ಬಜರಂಗದಳ ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ಉನ್ನತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಭಜರಂಗದಳದ ಮುಖಂಡ ಸುನಿಲ್ ಕೆ ಆರ್ ಅವರು ಪ್ರತಿಕ್ರಿಯೆ ನೀಡಿ, ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಬಗ್ಗೆ ಜಾಗೃತಿ ಕೆಲಸ ಮಾಡುತ್ತಿದೆ. ಆದರೆ ಜಿಹಾದಿಗಳು ತಮ್ಮ ಕೃತ್ಯ ಮುಂದುವರಿಸಿದ್ದಾರೆ. 9 ವರ್ಷಗಳಿಂದ ಪ್ರೀತಿಸುವ ನಾಟಕವಾಡಿದ ಯುವಕ ಅಕ್ರಮ್ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ.
ಮನೆಯವರನ್ನು ಬೆದರಿಸುವ ಕೃತ್ಯವನ್ನು ಕೂಡ ಮಾಡಿದ್ದಾನೆ. ಝಿನಾಳನ್ನು ಬ್ಲಾಕ್ಮೈಲ್ ಮಾಡಿ ಆತ ಅಪಹರಿಸಿದ್ದಾನೆ. ನೈಜ ಪ್ರೀತಿಗೆ ನಮ್ಮ ವಿರೋಧ ಇಲ್ಲ. ಆದರೆ ಪ್ರೀತಿಯ ನಾಟಕ ಮಾಡಿ ಲವ್ ಜಿಹಾದ್ ಮಾಡುವ ಕೃತ್ಯವನ್ನು ನಾವು ಎಂದಿಗೂ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿ ಯುವಕ ಡ್ರಗ್ಸ್ ಮಾರುವ ಹುಡುಗನಾಗಿದ್ದು, ಪೋಲಿಸ್ ಇಲಾಖೆ ಆತನನ್ನು ಬಂಧಿಸಬೇಕು. ಇದರ ಹಿಂದಿರುವ ಹುನ್ನಾರ ಬಯಲಾಗ ಬೇಕು. ಇದೊಂದು ವ್ಯವಸ್ಥಿತವಾದ ಷಡ್ಯಂತ್ರವಾಗಿದೆ. ಸಮ್ಮತಿ ಪತ್ರವನ್ನು ಬಲತ್ಕಾರವಾಗಿ ಸಹಿ ಮಾಡಿಸಿರುವ ಸಂಶಯವಿದೆ.
ಪಿಎಫ್‌ಐ ಸಂಘಟನೆಗಳ ಜೊತೆ ಸಂಪರ್ಕ ಇದೆ. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಸರಕಾರ ಹಾಗೂ ಗೃಹ ಸಚಿವರಿಗೆ ಒತ್ತಾಯ ಮಾಡುವುದಾಗಿ ಅವರು ಹೇಳಿದ್ದಾರೆ.