ಮೈಸೂರು/ಡೋರ್ನಹಳ್ಳಿ: ಮೈಸೂರು ಧರ್ಮಕ್ಷೇತ್ರ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗ ಳಲ್ಲೊಂದಾದ ಕೃಷ್ಣರಾಜನಗರ (ಕೆ.ಆರ್. ನಗರ) ತಾಲೂಕಿನ ಡೋರ್ನಹಳ್ಳಿಯ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ 2026ರ ವಾರ್ಷಿಕ ಮಹೋತ್ಸವವು ಜೂನ್ 4 ರಿಂದ ಜೂನ್ 13 ರವರೆಗೆ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ಜರುಗಲಿದೆ ಎಂದು ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ.

ಉದ್ಘಾಟನೆ ಮತ್ತು ಧ್ವಜಾರೋಹಣ:ವಾರ್ಷಿಕ ಮಹೋತ್ಸವದ ಧಾರ್ಮಿಕ ಆಚರಣೆಗಳು ಜೂನ್ 4, ಗುರುವಾರ ಸಂಜೆ 5:30 ಕ್ಕೆ ಮೈಸೂರು ಧರ್ಮಕ್ಷೇತ್ರ ಬಿಷಪ್ ಆದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ SJ ಅವರ ನೇತೃತ್ವದಲ್ಲಿ ನಡೆಯುವ ಸಾಂಪ್ರದಾಯಿಕ ಧ್ವಜಾರೋಹ ಣದೊಂದಿಗೆ ಅಧಿಕೃತವಾಗಿ ಚಾಲನೆ ಪಡೆಯಲಿವೆ.

ದೈನಂದಿನ ನೊವೇನಾ ಮತ್ತು ಬಲಿಪೂಜೆಗಳು:
ಜೂನ್ 4 ರಿಂದ ಜೂನ್ 12 ರವರೆಗೆ ಪ್ರತಿದಿನ ಭಕ್ತಾದಿಗಳಿಗಾಗಿ ವಿಶೇಷ ನೊವೇನಾ ಪ್ರಾರ್ಥನೆ, ಪ್ರವಚನ ಮತ್ತು ದಿವ್ಯ ಬಲಿಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನ ಹಬ್ಬದ ಮಹಾ ಬಲಿಪೂಜೆ: ಮಹೋತ್ಸವದ ಮುಖ್ಯ ದಿನವಾದ ಜೂನ್ 13, ಶನಿವಾರದಂದು ಬೆಳಗ್ಗೆ 10:00 ಗಂಟೆಗೆ ಮೈಸೂರು ಧರ್ಮಕ್ಷೇತ್ರ ಬಿಷಪ್ ಆದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ SJ ಅವರ ಮುಖ್ಯ ಕಾರ್ಮಿಕತ್ವದಲ್ಲಿ ‘ಹಬ್ಬದ ಮಹಾ ಜಂಟಿ ಬಲಿಪೂಜೆ’ಯು ಕನ್ನಡದಲ್ಲಿ ನೆರವೇರಲಿದೆ.

ಐತಿಹಾಸಿಕ ಹಿನ್ನೆಲೆ:ಸುಮಾರು 220 ವರ್ಷಗಳ ಹಿಂದೆ ಕೃಷಿಕರೊಬ್ಬರು ಜಮೀನು ಉಳುತ್ತಿದ್ದಾಗ ಪತ್ತೆಯಾದ ಸಂತ ಅಂತೋನಿಯವರ ಪವಾಡ ಸದೃಶ ಮರದ ಮೂರ್ತಿಯಿಂದ ಈ ಕ್ಷೇತ್ರವು ಪ್ರಸಿದ್ಧಿ ಪಡೆಯಿತು. 1920 ರಲ್ಲಿ ಅಂದಿನ ಧರ್ಮಗುರು ಫಾದರ್ ಎಸ್. ಡಿಸಿಲ್ವಾ ಅವರು ಮೈಸೂರು ಅರಮನೆಯ ದಿವಾನರಾದ ಶ್ರೀ ತಂಬು ಚೆಟ್ಟಿ ಹಾಗೂ ಶ್ರೀ ಧರ್ಮರಾಜ್ ಚೆಟ್ಟಿ ಸಹೋದರರ ನೆರವಿನಿಂದ ಇಲ್ಲಿ ಸಣ್ಣ ಪ್ರಾರ್ಥನಾ ಮಂದಿರ ನಿರ್ಮಿಸಿದರು.

ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ 1964 ರಲ್ಲಿ ಹೊಸ ಚರ್ಚ್ ನಿರ್ಮಾಣ ಕಾರ್ಯ ಆರಂಭಗೊಂಡು, 1969 ರ ಜೂನ್ 13 ರಂದು ಉದ್ಘಾಟನೆಗೊಂಡಿತು. ಈ ಕ್ಷೇತ್ರದ ಆಧ್ಯಾತ್ಮಿಕ ಮಹತ್ವವನ್ನು ಪರಿಗಣಿಸಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಅಕ್ಟೋಬರ್ 17, 2019 ರಂದು ಇದಕ್ಕೆ “ಮೈನರ್ ಬೆಸಿಲಿಕಾ” ಎಂಬ ಉನ್ನತ ಧಾರ್ಮಿಕ ಗೌರವವನ್ನು ಪ್ರದಾನ ಮಾಡಿದ್ದಾರೆ.

ಭಕ್ತಾದಿಗಳಿಗೆ ವಿಸ್ತೃತ ವ್ಯವಸ್ಥೆ: ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಸೂಕ್ತ ಸಾರಿಗೆ, ಕುಡಿಯುವ ನೀರು, ಸುರಕ್ಷತೆ, ವಾಹನ ಪಾರ್ಕಿಂಗ್ ಮತ್ತು ನೆರಳಿನ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕ್ಷೇತ್ರದ ರೆಕ್ಟರ್ ಆದ ಫಾದರ್ ಡೇವಿಡ್ ಸಹಾಯರಾಜ್ ಹಾಗೂ ಅಡ್ಮಿನಿಸ್ಟ್ರೇಟರ್ ಆದ ಫಾದರ್ ಪ್ರವೀಣ್ ಪೆದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಾತಿ, ಮತ ಭೇದವಿಲ್ಲದೆ ಎಲ್ಲಾ ಸದ್ಭಕ್ತರು ಈ ಮಹೋತ್ಸವದಲ್ಲಿ ಪಾಲ್ಗೊಂಡು ಸಂತ ಅಂತೋನಿಯವರ ಆಶೀರ್ವಾದ ಪಡೆಯಬೇಕಾಗಿ ಕೋರಲಾಗಿದೆ.




