ವಿಟ್ಲ: “ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆ ಯಿಂದ ದುಡಿದಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ” ಎಂಬ ಪೂಜ್ಯ ಹೆಗ್ಗಡೆಯವರ ಆಶಯದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ತಾಲೂಕಿನ ಅಳಿಕೆ ವಲಯದ ಮುಳಿಯ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಭಾ ಕಾರ್ಯಕ್ರಮವು ಮುಳಿಯ ದಂಬೆಯ ಶ್ರೀ ಶಾಸ್ತ ಕಲಾವೇದಿಕೆ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಭಾನುವಾರ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಬೆಳಿಗ್ಗೆ ಭಜನಾ ಕಾರ್ಯಕ್ರಮ ನೆರವೇರಿತು. ತದನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಳಿಕೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ಎರುಂಬು ನೆರವೇರಿಸಿದರು. ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನಡೆಿಸಿಕೊಟ್ಟರು. ಮುಳಿಯ ಒಕ್ಕೂಟದ ಅಧ್ಯಕ್ಷರಾದ ಉದಯ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಳಿಕೆ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರು ಹಾಗೂ ನೋಟರಿ ವಕೀಲರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ, 1982 ರಲ್ಲಿ ಪೂಜ್ಯ ಹೆಗ್ಗಡೆಯವರಿಂದ ಆರಂಭಗೊಂಡ ಈ ಯೋಜನೆಯು ಗ್ರಾಮೀಣ ಭಾಗದ ಜನರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ವಿಭಿನ್ನ ಹಾಗೂ ಮಹತ್ತರ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

ವೇದಿಕೆಯಲ್ಲಿ ವಿಟ್ಲ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಜಗದೀಶ್ ಶೆಟ್ಟಿ ಮುಳಿಯ, ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣತ್ತೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಗಣೇಶ್ ಕ್ಯಾಪ್ಸನ್, ಅಳಿಕೆ ವಲಯಾಧ್ಯಕ್ಷ ರಾಜೇಂದ್ರ ರೈ ಪುಣಚ, ಭಜನಾ ಮಂದಿರದ ಅಧ್ಯಕ್ಷ ಆನಂದ ಶೆಟ್ಟಿ ತಾಳಿಪಡು ಹಾಗೂ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಸಾಧಕರಿಗೆ ಗೌರವ ಸಮರ್ಪಣೆ:
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಾಗೂ ಗ್ರಾಮದ ಹಿರಿಯರಾದ ಸುಮಾರು 21 ಕ್ಕೂ ಹೆಚ್ಚು ಸಾಧಕರನ್ನು ಮತ್ತು ಒಕ್ಕೂಟದ ನೂತನ ಹಾಗೂ ನಿಕಟಪೂರ್ವ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಳಿಕೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ಮೀನಾಕ್ಷಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತದನಂತರ, ಸಂಘದ ವಾರ್ಷಿಕ ಸಾಧನೆಗಳು ಹಾಗೂ ಪ್ರಗತಿಯ ಕುರಿತಾದ ಸಮಗ್ರ ವರದಿ ವಚಾನ. ಸೇವಾ ಪ್ರತಿನಿಧಿ ವಿನಯ ರೈ ಅವರು ಸಭೆಯ ಮುಂದೆ ವಾಚಿಸಿ, ಮಂಡಿಸಿದರು.

ಕಾರ್ಯಕ್ರಮದ ವೇದಿಕೆ ನಿರ್ವಹಣೆ ಹಾಗೂ ಸುಂದರ ನಿರೂಪಣೆಯನ್ನು ಸದಾಶಿವ ಶೆಟ್ಟಿ ಅಳಿಕೆ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಕೊನೆಯಲ್ಲಿ, ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀಮತಿ ಲವಿಲ ಅವರು ಭಕ್ತಿಪೂರ್ವಕವಾಗಿ ವಂದನಾರ್ಪಣೆ ಮಾಡಿದರು. ಮುಳಿಯ ಒಕ್ಕೂಟದ ಸೇವಾಪ್ರತಿನಿಧಿ, ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಮತ್ತು ಸರ್ವ ಸದಸ್ಯರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.







