LATEST NEWS

ಪೆರುವಾಯಿ ಬದ್ಯಾರ್‌ನಲ್ಲಿ 50 ವರ್ಷಗಳ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ: ದಶಕಗಳ ಕನಸು ನನಸು!

ಪುತ್ತೂರು: ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಬದಿಯಾರು ಎಂಬಲ್ಲಿ ಕಳೆದ 50 ವರ್ಷಗಳಿಂದ ರಸ್ತೆ ಸೌಕರ್ಯವಿಲ್ಲದೆ ಪರದಾಡುತ್ತಿದ್ದ ಹತ್ತು ಕುಟುಂಬಗಳ ದಶಕಗಳ ಹಳೆಯ ಸಮಸ್ಯೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತುಕತೆಯ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ. ವಿವಾದಿತ ಜಾಗದ ಮಾಲೀಕರೊಂದಿಗೆ ಯಶಸ್ವಿ ಸಂಧಾನ ನಡೆಸಿ, ಇದೀಗ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಬದ್ಯಾರ್ ಪ್ರದೇಶದಲ್ಲಿ ಸುಮಾರು 10 ಕುಟುಂಬಗಳು ದಶಕಗಳಿಂದ ವಾಸಿಸುತ್ತಿದ್ದರೂ ಸೂಕ್ತ ರಸ್ತೆ ಸಂಪರ್ಕವಿರಲಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ರೋಗಿಗಳನ್ನು ಹೊತ್ತುಕೊಂಡು ಹೋಗಬೇಕಾದ, ಮನೆ ನಿರ್ಮಾಣದ ಸಾಮಗ್ರಿಗಳನ್ನು ತಲೆಯಲ್ಲಿ ಹೊತ್ತು ಸಾಗಿಸಬೇಕಾದ ದುಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿತ್ತು. ಖಾಸಗಿ ಜಾಗದ ಮಾಲೀಕರ ತಕರಾರಿನಿಂದಾಗಿ ಈ ರಸ್ತೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಹಿಂದೆ ಹಲವು ಜನಪ್ರತಿನಿಧಿಗಳು ಒಪ್ಪಂದಕ್ಕೆ ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಮಾತುಕತೆ ಮೂಲಕ ಇತ್ಯರ್ಥ:

ನಾಲ್ಕು ತಿಂಗಳ ಹಿಂದೆ ಈ ಭಾಗಕ್ಕೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ ಅವರು ಸ್ಥಳೀಯರ ಅಳಲನ್ನು ಆಲಿಸಿ, ರಸ್ತೆಯ ಅಗತ್ಯವನ್ನು ಮನಗಂಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು, ಮರುದಿನವೇ ಖಾಸಗಿ ಜಾಗದ ಮಾಲೀಕರನ್ನು ಕರೆಸಿ ಸೌಹಾರ್ದಯುತ ಮಾತುಕತೆ ನಡೆಸಿದರು.

ಶಾಸಕರ ಮನವಿಗೆ ಸ್ಪಂದಿಸಿದ ಜಾಗದ ಮಾಲೀಕರು ಮಾನವೀಯತೆಯ ನೆಲೆಗಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕೆ ತಮ್ಮ ಜಾಗವನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು. ಇದಾದ ಬಳಿಕ ಶಾಸಕರು ತಕ್ಷಣವೇ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಕಳೆದ ವಾರ ರಸ್ತೆ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಪಕ್ಷಾತೀತವಾಗಿ ಸ್ಪಂದಿಸಿದ ಶಾಸಕರು: ಫಲಾನುಭವಿಗಳ ಹೇಳಿಕೆ

ರಸ್ತೆ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಬದ್ಯಾರಿನ ಫಲಾನುಭವಿ ಗ್ರಾಮಸ್ಥರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. “ನಾವು ಹಲವು ವರ್ಷಗಳಿಂದ ವಿವಿಧ ರಾಜಕೀಯ ಮುಖಂಡರಿಗೆ, ಶಾಸಕರಿಗೆ ಮನವಿ ಮಾಡಿದ್ದರೂ ಯಾರೂ ನಮ್ಮ ಸಮಸ್ಯೆಯನ್ನು ಬಗೆಹರಿಸಿರಲಿಲ್ಲ. ಆದರೆ ಶಾಸಕ ಅಶೋಕ್ ರೈ ಅವರು ಯಾವುದೇ ಪಕ್ಷ ರಾಜಕೀಯ ಮಾಡದೆ, ನಮ್ಮ ಕಷ್ಟಕ್ಕೆ ಸ್ಪಂದಿಸಿ ದೊಡ್ಡ ಉಪಕಾರ ಮಾಡಿದ್ದಾರೆ. 50 ವರ್ಷಗಳ ನಮ್ಮ ರಸ್ತೆಯ ಕನಸನ್ನು ಕೇವಲ ನಾಲ್ಕೇ ತಿಂಗಳಲ್ಲಿ ನನಸು ಮಾಡಿಕೊಟ್ಟಿದ್ದಾರೆ. ಅವರು ಎಷ್ಟು ಸಮಯ ಅಧಿಕಾರದಲ್ಲಿ ಇರುತ್ತಾರೋ ಅಷ್ಟು ಸಮಯ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದು ಫಲಾನುಭವಿಗಳು ಭಾವುಕರಾಗಿ ನುಡಿದಿದ್ದಾರೆ.

ದಶಕಗಳ ವಿವಾದವನ್ನು ಇತ್ಯರ್ಥಪಡಿಸಿ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ ಅವರಿಗೆ ಇತ್ತೀಚೆಗೆ ಬದಿಯಾರು ನಿವಾಸಿಗಳು ಆತ್ಮೀಯವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

Share News