ಮಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ
ಘಟನೆ ವಿವರ
ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಎಂಬವರು ಮಾ.2 ರಂದು ಪುತ್ತೂರಿನಿಂದ ಕೂರ್ನಡ್ಕಕ್ಕೆ ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ, ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ಸುಮಾರು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಪಿರ್ಯಾದಿದಾರರ ಕಡೆಗೆ ಪಿಸ್ತೂಲ್ ನ್ನು ತೋರಿಸಿ ಗುಂಡು ಹೊಡೆಯಲು ಪ್ರಯತ್ನಿಸಿ ಬೆದರಿಸಿದ್ದಾನೆ. ಈ ವೇಳೆ ಅಬ್ದುಲ್ ಹಕೀಂ ಹಾಗೂ ಸ್ಥಳದಲ್ಲಿರುವವರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಆತ ಅದೇ ಮೋಟಾರು ಸೈಕಲ್ ನೊಂದಿಗೆ ಓಡಿ ಪರಾರಿಯಾಗಿದ್ದಾನೆ.
ತಕ್ಷಣ ಎಚ್ಚೆತ್ತ ಪುತ್ತೂರು ನಗರ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫಿಕ್ (19) ಎಂದು ಗುರುತಿಸಲಾಗಿದೆ. ಅ ಕ್ರ ನಂಬರ್: 26/2026, ಕಲಂ: 351(3) BNS 2023 ಮತ್ತು ಕಲಂ: 3, 25, 27 ಶಸ್ತ್ರಾಸ್ತ್ರ ಕಾಯ್ದೆ 1959 ಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.