LATEST NEWS

ಅಕ್ರಮ-ಸಕ್ರಮ ವಿಳಂಬ: ‘ಹಳೆ ಚಪ್ಪಲಿ ಹಿಡಿದು ಶಾಸಕರ ಕಚೇರಿಗೆ ಹೋಗಿ ಪ್ರಶ್ನಿಸಿ’ – ಬೆಳ್ತಂಗಡಿ ಶಾಸಕರಿಗೆ ಅಶೋಕ್ ರೈ ಟಾಂಗ್

ಪುತ್ತೂರು: “ನಾನು ಶಾಸಕನಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷಗಳಲ್ಲಿ 30 ಅಕ್ರಮ-ಸಕ್ರಮ ಬೈಠಕ್ ನಡೆಸಿ, ಸುಮಾರು 3,000 ಕಡತಗಳನ್ನು ವಿಲೇವಾರಿ ಮಾಡಿದ್ದೇನೆ ಹಾಗೂ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಿಸಿದ್ದೇನೆ. ಆದರೆ ನನ್ನ ಪಕ್ಕದ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಬೈಠಕ್ ನಡೆದಿಲ್ಲ, ಹಕ್ಕುಪತ್ರ ವಿತರಣೆಯೂ ಆಗಿಲ್ಲ. ಇದಕ್ಕೆ ಕಾರಣವೇನು?” ಎಂದು ಪುತ್ತೂರು ಶಾಸಕ ಅಶೋಕ್ ರೈ ಪ್ರಶ್ನಿಸಿದ್ದಾರೆ.

ಬಡಗನ್ನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಕ್ರಮ-ಸಕ್ರಮ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು. ಬೆಳ್ತಂಗಡಿ ಶಾಸಕರ ಹೆಸರನ್ನು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿ ನಡೆಸಿದ ಅವರು, “ಕೆಲಸ ಮಾಡದಿದ್ದರೂ ಜನ ನಮಗೆ ವೋಟು ಹಾಕುತ್ತಾರೆ ಎಂಬ ವಿಶ್ವಾಸ ಅವರಲ್ಲಿದೆ. ಇದಕ್ಕೆ ಅಲ್ಲಿನ ಜನತೆಯೇ ಕಾರಣ. ನೀವೆಲ್ಲರೂ ಒಟ್ಟಾಗಿ ಹಳೆ ಚಪ್ಪಲಿ ಹಿಡಿದುಕೊಂಡು ಶಾಸಕರ ಕಚೇರಿಗೆ ತೆರಳಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ನಿಮ್ಮ ಅಕ್ರಮ-ಸಕ್ರಮ ಕಡತಗಳಿಗೆ ಜೀವ ಬರಬಹುದು. ನೀವು ಸುಮ್ಮನಿದ್ದರೆ ಅಧಿಕಾರಿಗಳು ನಿಮ್ಮ ಅರ್ಜಿಗಳನ್ನು ‘ಕ್ಲೋಸ್ಡ್’ (ಮುಕ್ತಾಯ) ಎಂದು ಬರೆದು ಕೈತೊಳೆದುಕೊಳ್ಳುತ್ತಾರೆ” ಎಂದು ಎಚ್ಚರಿಸಿದರು.

ಪಕ್ಕದ ಕ್ಷೇತ್ರದ ಕಷ್ಟ ಅರಿಯಲಿ:

“ನನ್ನ ಅಕ್ಕಪಕ್ಕದ ಕ್ಷೇತ್ರದ ಶಾಸಕರಿಗೂ ನನ್ನಷ್ಟೇ ಅಧಿಕಾರವಿದೆ. ಆದರೂ ಏಕೆ ಕೆಲಸ ಮಾಡುತ್ತಿಲ್ಲ? ಬೇರೆ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂದು ಇಣುಕಿ ನೋಡುವ ಬದಲು, ಮೊದಲು ತಮ್ಮ ಕ್ಷೇತ್ರದ ಜನರ ಕಷ್ಟಗಳನ್ನು ಅರಿಯಲಿ” ಎಂದು ಅಶೋಕ್ ರೈ ತಿರುಗೇಟು ನೀಡಿದರು.

ಸಾಮಾಜಿಕ ನ್ಯಾಯದ ಮಾತು:

“ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಶಾಸಕರಿರುವ ಕಡೆ ಪಕ್ಷಭೇದವಿಲ್ಲದೆ ಎಲ್ಲರ ಕೆಲಸಗಳೂ ಆಗುತ್ತವೆ. ಆದರೆ ಬಿಜೆಪಿ ಶಾಸಕರಿರುವ ಕಡೆ ಕೇವಲ ಬಿಜೆಪಿಯವರ ಕೆಲಸ ಮಾತ್ರ ಆಗುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ನನ್ನ ವಿರುದ್ಧ ಧಿಕ್ಕಾರ ಕೂಗಿದವರಿಗೂ ನಾನು ಅಕ್ರಮ-ಸಕ್ರಮ ಮಾಡಿಕೊಟ್ಟಿದ್ದೇನೆ. ಆದರೆ, ನನ್ನ ಬಳಿಯೇ ಬಂದು ಕೆಲಸ ಮಾಡಿಸಿಕೊಂಡು ಹೋದ ವ್ಯಕ್ತಿಯೊಬ್ಬ, ‘ಪುತ್ತೂರು ಶಾಸಕರು ಏನೂ ಮಾಡಿಲ್ಲ’ ಎಂದು ಬ್ಯಾನರ್ ಹಿಡಿದು ರಸ್ತೆಯಲ್ಲಿ ಪ್ರತಿಭಟನೆಗೆ ಕೂತಿದ್ದ” ಎಂದು ಶಾಸಕರು ವ್ಯಂಗ್ಯವಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಹಶೀಲ್ದಾರ್ ಕೂಡ್ಲಿಗಿ, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ ಹಾಗೂ ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಸ್ವಾಗತಿಸಿ, ವಂದಿಸಿದರು.

Share News