canaratvnews

ಯುವಜನತೆಯಲ್ಲಿ ಪರಿಸರ ಪ್ರೇಮ ಜಾಗೃತಿ: ಕಾಂತಾವರ ಕಾಡಿನಲ್ಲಿ ‘ಜಂಗಲ್ ಜರ್ನಿ 2026’ ಪರಿಸರ ಶಿಬಿರ ಯಶಸ್ವಿ

ಮಂಗಳೂರು: ಇಂದಿನ ಯುವ ಪೀಳಿಗೆಯಲ್ಲಿ ಪ್ರಕೃತಿಯ ಬಗ್ಗೆ ಒಲವು ಮೂಡಿಸುವ ಮತ್ತು ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಾಂತಾವರ ಅರಣ್ಯ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದ “ಜಂಗಲ್ ಜರ್ನಿ 2026” ಏಕದಿನ ವಿಶಿಷ್ಟ ಪರಿಸರ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಭಾರತೀಯ ಕ್ಯಾಥೋಲಿಕ ಯುವ ಸಂಚಲನ (ICYM) ಸಂತ ಜಾನ್ ಪೌಲ್ ವಲಯ, ಕರ್ನಾಟಕ ಅರಣ್ಯ ಇಲಾಖೆ, ವನ ಚಾರಿಟಬಲ್ ಟ್ರಸ್ಟ್, CASK ಸೆಂಟಿನರಿ ಟ್ರಸ್ಟ್ ಹಾಗೂ MIJARC ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಪಿ. ಶ್ರೀಧರ್ ಅವರ ಮಾರ್ಗದರ್ಶನದಂತೆ ಪಾಲ್ಗೊಂಡಿದ್ದ ಅರಣ್ಯ ಬೀಟ್ ಪೊಲೀಸ್ ಅಧಿಕಾರಿ ಶ್ರೀ ಚಂದ್ರಶೇಖರ್ ಅವರು ಮಾತನಾಡಿ, “ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಲು ಯುವಜನತೆಯ ಪಾತ್ರ ಅತ್ಯಂತ ದೊಡ್ಡದಾಗಿದೆ,” ಎಂದು ಕರೆ ನೀಡಿದರು.

ಕಾಂತಾವರ ಫಾರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ನಡೆದ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಅರುಣ್ ಅವರು, ಪ್ರಸ್ತುತ ನಮ್ಮ ಅರಣ್ಯಗಳ ಸ್ಥಿತಿಗತಿ ಹಾಗೂ ಪರಿಸರ ನಾಶದಿಂದ ಎದುರಾಗುತ್ತಿರುವ ಸವಾಲುಗಳ ಕುರಿತು ಯುವಕರಿಗೆ ಮನವರಿಕೆ ಮಾಡಿಕೊಟ್ಟರು.

ಈ ವಿಭಿನ್ನ ಪರಿಸರ ನಡಿಗೆ ಹಾಗೂ ಜಾಗೃತಿ ಶಿಬಿರದಲ್ಲಿ ವಿವಿಧ ಭಾಗಗಳ ಒಟ್ಟು 67 ಉತ್ಸಾಹಿ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಲಯ ICYM ನಿರ್ದೇಶಕರಾದ ವಂ. ರಿಚರ್ಡ್ ಡಿಸೋಜಾ, ಕರ್ನಾಟಕ ಪ್ರಾಂತೀಯ ICYM ಕಾರ್ಯದರ್ಶಿ ವಂ. ಅಶ್ವಿನ್ ಕಾರ್ಡೋಜ, MIJARC ಕರ್ನಾಟಕ ಸಂಯೋಜಕರಾದ ಕು. ರಿಷಲ್ ಡಿಸೋಜಾ ಮತ್ತು ಜಾನ್ ವಿನ್‌ಸ್ಟೋನ್ ಹಾಗೂ ವನ ಚಾರಿಟಬಲ್ ಟ್ರಸ್ಟ್‌ನ ಜೀತ್ ಮಿಲನ್ ಉಪಸ್ಥಿತರಿದ್ದು, ಯುವ ಪರಿಸರ ಪ್ರೇಮಿಗಳನ್ನು ಪ್ರೋತ್ಸಾಹಿಸಿದರು.

Share News
Exit mobile version