ಮಂಗಳೂರು: ಏಪ್ರಿಲ್ 10: ಮಂಗಳೂರಿನಲ್ಲಿ ನಡೆಯಲಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಇದು ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿಸುವ ಮೂಲಕ ಇತಿಹಾಸ ಬರೆಯಲಿದೆ,” ಎಂದು ರಾಜ್ಯದ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.ಶಕ್ತಿನಗರದ ಕಲಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ‘ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ-2026’ರ ಲಾಂಛನ (Logo) ಬಿಡುಗಡೆ ಮಾಡಿ ಅವರು ಮಾತನಾಡಿದರು

.ʼʼಕೊಂಕಣಿಗರ ಜನಸಂಖ್ಯೆ ಕಡಿಮೆಯಿದ್ದರೂ, ಅವರ ಉತ್ಸಾಹ ಮತ್ತು ಸೃಜನಶೀಲತೆ ಶ್ಲಾಘನೀಯ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮತ್ತು ಸಮಾಜ ಸೇವೆ ಯಲ್ಲಿ ಕೊಂಕಣಿ ಸಮುದಾಯ ಮುಂಚೂಣಿಯಲ್ಲಿದೆ. ಸಂಗೀತ ಅವರಿಗೆ ರಕ್ತಗತವಾಗಿದೆ. ಹಲವು ದಾಖಲೆ ಗಳನ್ನು ಬರೆದ ಮಾಂಡ್ ಸೊಭಾಣ್ ಸಂಸ್ಥೆ ಈಗ ಆರು ಸಾವಿರ ಗಾಯಕರು ಮತ್ತು ಐದು ಸಾವಿರ ಹಾಡುಗ ಳಿಂದ ಹೊಸ ವಿಶ್ವ ದಾಖಲೆಯನ್ನು ರಚಿಸಲು ಸಜ್ಜಾಗಿದೆ. ಖಂಡಿತಾ ಈ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಸಾಧ್ಯವಾದಲ್ಲಿ ನಾನೂ ಕಾರ್ಯಕ್ರಮಕ್ಕೆ ಬರುವೆʼʼ ಎಂದು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಕೊಂಕಣಿಯ ಪ್ರಮುಖ ಸಾಂಸೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಅಸ್ತಿತ್ವದ ಮಾಣಿಕ್ಯ ಮಹೋತ್ಸವ ಆಚರಣಾ ಸಂದರ್ಭದಲ್ಲಿ, ಇದೇ ನವೆಂಬರ್ 03 ರಿಂದ 15 ರವರೆಗೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತವನ್ನು ವೀಣೆಯ ಪ್ರತಿಕೃತಿ ಮೇಲಿರುವ 12 ವಿಭಿನ್ನ ರಂಗಿನ ದೀಪಗಳನ್ನು ಬೆಳಗಿಸಿ ಮತ್ತು ಹೂವಿನ ಮೊಗ್ಗಿನಿಂದ ಸಮಾವೇಶದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಅಧ್ಯಕ್ಷ ಲುವಿ ಪಿಂಟೊ, ಕೊಂಕಣಿ ಸಂಗೀತಕ್ಕೆ ಮಹೋನ್ನತ ಹಿರಿಮೆ ತಂದು ಕೊಟ್ಟ ಎರಿಕ್ ಒಝೇರಿಯೊರವರ ಕೆಲಸಗಳನ್ನು ಮುಂದುವರಿಸುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ. ಇದು ಕೇವಲ ಗಿನ್ನೆಸ್ ದಾಖಲೆಯ ಪ್ರಯತ್ನವಾಗದೆ, ಕೊಂಕಣಿ ಒಗ್ಗಟ್ಟನ್ನು ಆಚರಿಸುವ, ಕೊಂಕಣಿ ಬಾವುಟವನ್ನು ಜಗದೆತ್ತರಕ್ಕೆ ಏರಿಸುವ ಹಾಗೂ ಈ ಮೂಲಕ ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಅವಕಾಶವಾಗಲಿದೆ. ಇದುವರೆಗೆ ನಮ್ಮ ಕಾರ್ಯಕ್ರಮದ ಶಿಸ್ತು, ಅಚ್ಚುಕಟ್ಟುತನ ನೋಡಿ ಜನರೇ ಸಹಕರಿಸಿದ್ದಾರೆ. ಈ ಕಾರ್ಯಕ್ರಮ ಕೂಡಾ ಎಲ್ಲರ ಸಹಕಾರದಿಂದ ಯಶಸ್ವಿಯಾಗಲಿದೆ. ಎಂದು ಹೇಳಿದರು.