ಪುತ್ತೂರು: ನಾವು ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ರಸ್ತೆಯನ್ನು ಇದುವರೆಗೂ ಯಾರೂ ಅಭಿವೃದ್ದಿ ಮಾಡಿಲ್ಲ, ನೀವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೀರಿ, ಪಕ್ಷ ಬೇಧವಿಲ್ಲದೆ ಅನುದಾನವನ್ನು ನೀಡುತ್ತಿದ್ದೀರಿ, ನಮ್ಮ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ನಾವು ನಿಮ್ಮ ಪರ ಬಹಿರಂಗ ಪ್ರಚಾರ ಮಾಡಿಯೇ ಮಾಡುತ್ತೇವೆ ಎಂದು ಪೆರುವಾಯಿ ಗ್ರಾಮದ ಬಿಜೆಪಿ ಕಾರ್ಯಕರ್ತರ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ರೈ ನಿವಾಸಕ್ಕೆ ಬಂದು ಭರವಸೆ ನೀಡಿದ್ದಾರೆ.

ಪೆರುವಾಯಿ ಗ್ರಾಮದ ಬದಿಮಾರ್ ಪ್ರದೇಶದಲ್ಲಿ ಅನೇಕ ಮನೆಗಳಿದೆ. ನಮ್ಮ ರಸ್ತೆ ಇನ್ನೂ ಅಭಿವೃದ್ದಿಯಾಗಿಲ್ಲ. ರಸ್ತೆಯಾಗಬೇಕಾದರೆ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡಬೇಕಾಗುತ್ತದೆ. ಇಷ್ಟು ವರ್ಷದಲ್ಲಿ ನಾವು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ. ರಾಜಕೀಯ ನೇತಾರರು ಈ ಹಿಂದೆ ಭರವಸೆಯನ್ನು ಮಾತ್ರ ಕೊಟ್ಟಿದ್ದಾರೆ ವಿನಾ ನಮ್ಮ ಸಮಸ್ಯೆ ಪರಿಹಾರ ಮಾಡಿಲ್ಲ.
ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿ ನಮ್ಮ ಪ್ರದೇಶಕ್ಕೆ ರಸ್ತೆಯನ್ನು ನಿರ್ಮಾಣ ಮಾಡಿ ಕೊಡುತ್ತೀರಿ ಎಂಬ ಪೂರ್ಣ ನಂಬಿಕೆ ನಮ್ಮಲ್ಲಿದೆ. ನಮ್ಮ ಬೇಡಿಕೆಯನ್ನು ನೀವು ಈಡೇರಿದ್ದಲ್ಲಿ ನಾವು ಬಹಿರಂಗವಾಗಿ ನಿಮ್ಮ ಪರ ಪ್ರಚಾರ ಮಾಡುತ್ತೇವೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಶಾಸಕರ ಮುಂದೆ ಶಪಥ ಮಾಡಿದ್ದಾರೆ.
ಈ ವೇಳೆ ವಸಂತಶೆಟ್ಟಿ ಬದಿಯಾರು, ಜಯರಾಮ ಬಿ, ಪದ್ಮಶ್ರೀ, ಜಯರಾಮ ವಿಠಲ, ಮತ್ತು ಗೀತಾ ಉಪಸ್ಥಿತರಿದ್ದರು. ನಮ್ಮ ಜೊತೆ ಇನ್ನೂ ಅನೇಕ ಮಂದಿ ಇದ್ದು ಅವರೆಲ್ಲರನ್ನೂ ನಾವು ಸೇರಿಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಶಾಸಕರು ಖಾಸಗಿ ವ್ಯಕ್ತಿಗಳ ಜೊತೆ ಮಾತುಕತೆ ನಡೆಸುವ ಪ್ರಯತ್ನವನ್ನು ಮಾಡುತ್ತೇನೆ. ಅವರ ಮನವೊಲಿಸಿ ರಸ್ತೆ ನಿರ್ಮಾಣದ ಭರವಸೆಯನ್ನು ನೀಡಿದರು.