ಮಂಗಳೂರು, ಜೂನ್.19: ಮಂಗಳೂರು ನಗರದ ಬಿಜೈ 31ನೇ ವಾರ್ಡಿನ ನೋಡು ಬಟ್ಟಗುಡ್ಡೆ ಪರಿಸರದಲ್ಲಿ ಕಲುಷಿತ ನೀರು ಪೂರೈಕೆಯಾಗಿ ಹಲವರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ, ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಾರ್ವಜನಿಕರ ಮತ್ತು ಪಾಲಿಕೆ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಯಿತು. ನೋಡು ಬಟ್ಟಗುಡ್ಡೆ ರಾಮಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.

ಸ್ಥಳ ತಪಾಸಣೆ ಮತ್ತು ನೀರಿನ ಪರೀಕ್ಷೆ: ಕುಡಿಯುವ ನೀರಿಗೆ ಡ್ರೈನೇಜ್ ನೀರು ಸೇರಿರುವ ದೂರು ಬಂದ ತಕ್ಷಣ ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಧಿಕಾರಿಗಳು ನಿನ್ನೆಯಿಂದ ನಲ್ಲಿಯ ನೀರಿನ ಮಾದರಿಯನ್ನು ದಿನಕ್ಕೆ 3-4 ಬಾರಿ ಪರೀಕ್ಷಿಸಿದ್ದು, ಸದ್ಯ ನೀರು ಎಲ್ಲಾ ರೀತಿಯ ಬಳಕೆಗೆ ಯೋಗ್ಯವಾಗಿದೆ ಎಂದು ಸಾರ್ವಜನಿಕರ ಸಮ್ಮುಖದಲ್ಲೇ ಖಚಿತಪಡಿಸಿದ್ದಾರೆ.
ಸಾರ್ವಜನಿಕರು ತಮ್ಮ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ಟ್ಯಾಂಕ್‌ಗಳಲ್ಲಿ ಈಗಾಗಲೇ ಸಂಗ್ರಹವಾಗಿರುವ ಹಳೆಯ ನೀರನ್ನು ಖಾಲಿ ಮಾಡಿ, ಹೊಸದಾಗಿ ಬರುವ ಶುದ್ಧ ನೀರನ್ನು ಸಂಗ್ರಹಿಸಿಕೊಳ್ಳಲು ಶಾಸಕರು ಸೂಚಿಸಿದರು. ಮುಂದಕ್ಕೆ ನೀರಿನ ಶುದ್ಧತೆಯಲ್ಲಿ ಯಾವುದೇ ಸಂದೇಹವಿದ್ದರೂ ತಕ್ಷಣವೇ ತಮ್ಮ ಅಥವಾ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲು ಕೋರಿದರು.
ಆರೋಗ್ಯಕ್ಕೆ ಮೊದಲ ಆದ್ಯತೆ: ಇದು ಜನರ ಆರೋಗ್ಯದ ವಿಷಯವಾಗಿದ್ದರಿಂದ ಯಾವುದೇ ರಾಜಿ ಇಲ್ಲ ಎಂದು ಶಾಸಕರು ಹೇಳಿದರು. ಮುಂದಿನ ಕೆಲವು ದಿನಗಳವರೆಗೆ ಅಧಿಕಾರಿಗಳು ಈ ಭಾಗದ ಮನೆಗಳಿಗೆ ನಿರಂತರವಾಗಿ ಭೇಟಿ ನೀಡಿ ಅಗತ್ಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಪ್ರಶಾಂತ್ ಆಳ್ವ, ನಾರಾಯಣ್, ಸಂತೋಷ ಉಳ್ಳಾಲ್, ರಾಜೇಶ್ ಕಿಣಿ, ದೀಪಿಕಾ ಮನೋಜ್ ಮತ್ತು ಪಾಲಿಕೆಯ ಎಇಇ ನಾಗರಾಜ್, ಎಇಇ ಶಿವಲಿಂಗಯ್ಯ, ಕೆಯುಐಡಿಎಫ್‌ಸಿ ಅಧಿಕಾರಿಗಳಾದ ಸುರೇಶ್, ಖಾದರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.