ವಿಟ್ಲ: ಆರೋಪಿಯೋರ್ವನ ಬಳಿ ಹಣದ ಬೇಡಿಕೆ ಮುಂದಿಟ್ಟ ಆರೋಪದಲ್ಲಿ ವಿಟ್ಲ ಠಾಣಾ ಎಸೈ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಮೇ 8ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿಯಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಎಸ್ಸೈ ಕೌಶಿಕ್ ದಾಳಿ ಮಾಡಿದ್ದರು. ಈ ವೇಳೆ ಜುಗಾರಿ ಆಟದಲ್ಲಿ ನಿರತರಾಗಿದ್ದವರು ಪರಾರಿಯಾಗಿದ್ದರೆ, ಸ್ಥಳದಲ್ಲಿ ಬೈಕೊಂದು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಕಾನೂನಾತ್ಮಕವಾಗಿ ಕ್ರಮ ಜರುಗಿಸದ ಎಸ್ಸೈ ಕೌಶಿಕ್, ಬೈಕ್ ಮಾಲಕನಿಗೆ ಕರೆ ಮಾಡಿ ಠಾಣೆಗೆ ಬರಮಾಡಿಕೊಂಡಿದ್ದಾರೆ. ಅಲ್ಲದೇ, ಬಳಿಕ ಬೈಕ್ ಮಾಲಕನಿಗೆ ಮೂರನೇ ವ್ಯಕ್ತಿಯೊಬ್ಬನ ಮೂಲಕ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಎಸ್ಸೈ ಕೌಶಿಕ್ ರನ್ನು ಜೂ.12ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.