ವಿಟ್ಲ :ಮಾಣಿಲ ದೇಲಂತಮಜಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಡಗರದೊಂದಿಗೆ ವಿಜ್ರಂಭಣೆಯಿಂದ ಜರುಗಿತು.

ಪ್ರಾತಃಕಾಲದಲ್ಲಿ ವೇದಮೂರ್ತಿ ಶ್ರೀ ಅನಂತರಾಜ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಬಳಿಕ ನೂರೆಂಟು ನಾರೀಕೇಳ (ತೆಂಗಿನಕಾಯಿ) ಗಣಪತಿ ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಭಕ್ತರ ಸಮ್ಮುಖದಲ್ಲಿ ನಡೆದವು. ಮಧ್ಯಾಹ್ನ ಸಾರ್ವಜನಿಕ ಮಹಾಅನ್ನಸಂತರ್ಪಣೆ ಜರುಗಿತು.

ಗಣೇಶೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವು ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಉತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಅಪ್ಪಯ್ಯ ನಾಯಕ್ ಹಾಗೂ ಪ್ರಸ್ತುತ ಅಧ್ಯಕ್ಷರಾದ ಗಣೇಶ್ ಬಾಳೆಕಾನ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಕಾರ್ಯದರ್ಶಿ ಶ್ರೀ ಕೃಷ್ಣಾನಂದ ಮಾಣಿಮೂಲೆ ಸ್ವಾಗತಿಸಿದರು. ಸುಂದರ ಕುಲಾಲ್ ಪಕಳಕುಂಜ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.
ಭವ್ಯ ಶೋಭಾಯಾತ್ರೆ:
ಸಾಯಂಕಾಲ ಶ್ರೀ ಮಹಾಗಣಪತಿಯ ಭವ್ಯವಾದ ಶೋಭಾಯಾತ್ರೆಯು ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ವಿವಿಧ ಭಜನಾ ಮಂಡಳಿಗಳ ಭಜನೆ, ಜಯಘೋಷ ಹಾಗೂ ಭಕ್ತರ ಸಡಗರದೊಂದಿಗೆ ಸಾಗಿದ ಶೋಭಾ ಯಾತ್ರೆಯು ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ತದನಂತರ ಭಕ್ತ ಸಾಗರದ ಸಮ್ಮುಖದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸುವುದರೊಂದಿಗೆ ಈ ವರ್ಷದ ಗಣೇಶೋತ್ಸವವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
