ಕೋಡಿಕಲ್, ಆ.31: ವಿಶ್ವ ಹಿಂದೂ ಪರಿಷತ್, ಬಜರಂಗದಳ ಕೊಟ್ಟಾರ ಖಂಡ ಸಮಿತಿ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೊಟ್ಟಾರ ಮತ್ತು ಜನಸೇವಾ ಪ್ರತಿಷ್ಠಾನ ಟ್ರಸ್ಟ್ ಕೊಟ್ಟಾರ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆಯು ಕಲ್ಬಾವಿ-ಕೊಟ್ಟಾರದ ಶ್ರೀ ಕುರುಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ರವಿವಾರ ಜರುಗಿತು.

ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನ ಸಂಭ್ರಮದಲ್ಲಿದ್ದು, ದೇಶದಲ್ಲಿ ಹಿಂದೂ ಸಮುದಾಯವನ್ನು ಒಗ್ಗಟ್ಟು ಮಾಡುವಲ್ಲಿ ಪ್ರಧಾನ ಭೂಮಿಕೆ ವಹಿಸಿದೆ. ಈ ಸಂಘಟನೆಯ ಅಡಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾ ವಾಹಿನಿಯಂತಹ ಸಂಘಟನೆಗಳು ಸ್ಥಳೀಯ ಮಟ್ಟದಲ್ಲಿ ಹಿಂದೂ ಸಮುದಾಯದ ಒಳಿತಿಗಾಗಿ, ಲವ್ ಜಿಹಾದ್, ಮತಾಂತರದಂತಹ ಕೃತ್ಯಗಳನ್ನು ತಡೆಯುವಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿವೆ. ನಮ್ಮ ಹಿಂದೂ ಸಮಾಜದ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ ಹೇಳಿಕೊಡಲು ಬಾಲ ಸಂಸ್ಕಾರದಂತಹ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಕೊಟ್ಟಾರ ಖಂಡ ಸಮಿತಿ ಅದನ್ನು ಮಾದರಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಬಜರಂಗದಳ ಮಂಗಳೂರು ವಿಭಾಗದ ಮಾಜಿ ಸಂಚಾಲಕ ರಾಜಗೋಪಾಲ್ ರೈ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಸಂಘಟನೆಗಳು ನಿಸ್ವಾರ್ಥವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿವೆ ಎಂದರು. ಮುಖ್ಯ ಅತಿಥಿಗಳಾಗಿ ಹಿಂದೂ ಧಾರ್ಮಿಕ ಸೇವಾ ಸಂಘ ಅಶೋಕನಗರದ ಗೌರವಾಧ್ಯಕ್ಷ ರಾಜಗೋಪಾಲ ಶೆಟ್ಟಿ, ಭಗವತಿ ಮೆಡಿಕಲ್ ಕೋಡಿಕಲ್ ಮಾಲಕ ತಿಲಕ್ ಮಂಗಲ್ಪಾಡಿ, ಭ್ರಾಮರಿ ಎಂಟರ್‌ಪ್ರೈಸಸ್ ಮಾಲಕ ಮಂಜುನಾಥ್ ಸುವರ್ಣ, ವಿಶ್ವ ಹಿಂದೂ ಪರಿಷತ್ ಮಣ್ಣಗುಡ್ಡ ಪ್ರಖಂಡ ಅಧ್ಯಕ್ಷ ಲೋಕೇಶ್ ಶೆಟ್ಟಿ ಗುರಿಕಂಡ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಕೊಟ್ಟಾರ ಖಂಡ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಪಾಲ್ದಾಡಿ, ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಮನೋಹರ್, ಜನಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷರು, ಬಜರಂಗದಳ ಕೊಟ್ಟಾರ ಸಂಚಾಲಕ ಪ್ರವೀಣ್ ಶೆಟ್ಟಿ, ಹಿಂದೂ ಧಾರ್ಮಿಕ ಸೇವಾ ಸಮಿತಿ ಗೌರವಾಧ್ಯಕ್ಷ ಜಗದೀಪ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಕೊಟ್ಟಾರ ಕಾರ್ಯದರ್ಶಿ ಸಂತೋಷ್ ತೆಂಡೂಲ್ಕರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
