ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿ ಪೂರ್ವಕವಾಗಿ ನೆರವೇರಿತು.

ಹಬ್ಬದ ಅಂಗವಾಗಿ ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಭಿಷೇಕ ಜರುಗಿತು. ತದನಂತರ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ಭವ್ಯ ವೇದಿಕೆಯಲ್ಲಿ ಶಾಸ್ತ್ರೋಕ್ತವಾಗಿ ಕಲಶ ಪ್ರತಿಷ್ಠಾಪನೆ, ಲಲಿತಾ ಸಹಸ್ರನಾಮ ಪಠಣ, ಭಜನೆ ಹಾಗೂ ಶ್ರೀ ವರಮಹಾಲಕ್ಷ್ಮೀ ದೇವಿಗೆ ವಿಶೇಷ ಮಹಾಪೂಜೆ ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ಪುಣ್ಯ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಾತೆಯರು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯಲ್ಲಿ ಭಾಗವಹಿಸಿದ ಸರ್ವ ಮಾತೆಯರಿಗೂ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ‘ಬಾಗಿನ’ ನೀಡಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಈ ಧಾರ್ಮಿಕ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಸಾಯಿರಾಮ್ ಎಚ್.ಎಸ್., ಕಿಶೋರ್ ದಂಡೆಕೇರಿ, ಕೃತೀನ್ ಧೀರಜ್ ಅಮೀನ್, ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ಪಿ.ಕೆ. ಗೌರವಿ ರಾಜಶೇಖರ್, ಲತೀಶ್ ಸುವರ್ಣ ಸೇರಿದಂತೆ ಶ್ರೀಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
