canaratvnews

ಓಕ್ಕೆತ್ತೂರು ಶಾಲೆಯಲ್ಲಿ ‘ಹಸಿರೇ ಉಸಿರು’ ವನಮಹೋತ್ಸವ ಮತ್ತು ಗಿಡ ವಿತರಣೆ

ಬಂಟ್ವಾಳ ಜೂನ್ 10 : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಓಕ್ಕೆತ್ತೂರಿನಲ್ಲಿ “ಹಸಿರೇ ಉಸಿರು” ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸತೀಶ್ ಲುಕ್ ಅವರು ಗಿಡ ನೆಡುವ ಮೂಲಕ ನೆರವೇರಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಪರಿಸರ ಮತ್ತು ಮಾನವ ಕುಲಕ್ಕೆ ಅವಿನಾಭಾವ ಸಂಬಂಧವಿದೆ. ಪರಿಸರ ನಾಶವಾದರೆ ಅದರ ದುಷ್ಪರಿಣಾಮವನ್ನು ಇಡೀ ಮಾನವ ಕುಲವೇ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸಬೇಕು” ಎಂದು ಸವಿವರವಾಗಿ ಮನವರಿಕೆ ಮಾಡಿಕೊಟ್ಟರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಮಹಮ್ಮದ್ ಹಾರೀಸ್ ಸಿ.ಎಚ್. ಹಾಗೂ ಪ್ರಭಾರ ಮುಖ್ಯ ಶಿಕ್ಷಕಿ ಮಮತಾ ಅವರು ಪರಿಸರ ದಿನಾಚರಣೆಯ ಮಹತ್ವ ಮತ್ತು ಅದರ ಆಚರಣೆಯ ಅಗತ್ಯತೆಯ ಬಗ್ಗೆ ಮಾತನಾಡಿದರು. ಕೆಲಿಂಜ ಉಪವಲಯ ಅರಣ್ಯಾಧಿಕಾರಿ ಕೃಷ್ಣ ಜೋಗಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಗಿಡಗಳನ್ನು ವಿತರಿಸಲಾಯಿತು. ಶಾಲಾ ಸಹ ಶಿಕ್ಷಕ ಜಯಪ್ರಕಾಶ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿದರು. ಸಹ ಶಿಕ್ಷಕಿ ಯಶಸ್ವಿನಿ ವಂದಿಸಿದರು. ಸಹ ಶಿಕ್ಷಕಿಯರಾದ ಮಿಸ್ರಿಯಾ, ಪವಿತ್ರ ಹಾಗೂ ಪ್ರಿಯಲತಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು

Share News
Exit mobile version