ಮಂಗಳೂರು,: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೇತೃತ್ವದಲ್ಲಿ “ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ – ಮುಂದಿನ ದಾರಿ” ಎಂಬ ವಿಷಯದಡಿ ಪರಿಣಾಮಕಾರಿ ಅನುಷ್ಠಾನ, ಮುಂದಿನ ಬೆಳವಣಿಗೆ ಹಾಗೂ ಸಾರ್ವಜನಿಕರು ಮತ್ತು ಕಾರ್ಯಕರ್ತರ ಪಾತ್ರದ ಕುರಿತು ಚಿಂತನ ಸಭೆಯು ಮಂಗಳವಾರ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ದೇವತಾಶಾಸ್ತ್ರ ಕಾಲೇಜಿನ ಪತ್ರಾಗಾರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ತುಳು–ಕನ್ನಡ ಸಾಹಿತಿ ಬೆನೆಟ್ ಜಿ. ಅಮಣ್ಣ ಅವರು, ತುಳು ಶತಮಾನಗಳ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾಷೆಯಾಗಿದೆ. ತುಳು ಭಾಷೆಗೆ ಜಾತಿ–ಮತದ ಭೇದವಿಲ್ಲ. ತುಳುನಾಡಿನ ಸರ್ವ ಸಮುದಾಯದ ಜನರನ್ನು ಬೆಸೆಯುವ ಭಾಷೆ ತುಳು. ತುಳುನಾಡಿನ ಮೂಲ ಭಾಷೆಯಾದ ತುಳುವಿನಲ್ಲಿ ಅಪಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಪತ್ತು ಅಡಗಿದೆ ಎಂದರು.
ಜಿಲ್ಲೆಯ ಸುಮಾರು 38 ಶಾಲೆಗಳಲ್ಲಿ ಈಗಾಗಲೇ ತುಳು ಪಾಠ ನಡೆಯುತ್ತಿದ್ದು, ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಹಲವು ವಸ್ತುಸಂಗ್ರಹಾಲಯಗಳೂ ಇವೆ. ತುಳು ಭಾಷೆಗೆ ದೊರೆತಿರುವ ಆಡಳಿತಾತ್ಮಕ ಮಾನ್ಯತೆ ಸರ್ಕಾರಿ ಕಚೇರಿಗಳಲ್ಲಿಯೂ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದಕ್ಕೆ ಸರ್ಕಾರದ ಕ್ರಮಗಳ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಅವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಸಚಿವ ಹಾಗೂ ವಿದ್ವಾಂಸ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ, ತುಳು ಭಾಷೆಗೆ ಸರ್ಕಾರದ ಮಾನ್ಯತೆ ದೊರೆತಿರುವುದು ತುಳುವರಿಗೆ ಸಂತಸದ ಹಾಗೂ ಹೆಮ್ಮೆಯ ವಿಚಾರವಾಗಿದ್ದು, ಇದು ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ತುಳು ಭಾಷೆ ಮತ್ತು ಸಂಸ್ಕೃತಿಯ ಬೇರು ಕೃಷಿ ಬದುಕಿನಲ್ಲಿದೆ. ದೈವಾರಾಧನೆ, ತಾಳಮದ್ದಳೆ, ಯಕ್ಷಗಾನ ಸೇರಿದಂತೆ ತುಳುನಾಡಿನ ವಿಶಿಷ್ಟ ಆಚರಣೆಗಳು ಭಾಷೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ. ಮಂಗಳೂರು, ಉಡುಪಿ, ಪುತ್ತೂರು, ಸುಳ್ಯ ಸೇರಿದಂತೆ ವಿವಿಧ ಪ್ರದೇಶಗಳ ಆಚರಣೆ, ವಿಚಾರ ಮತ್ತು ಭಾಷಾ ವೈವಿಧ್ಯತೆಯನ್ನು ಒಗ್ಗೂಡಿಸಿ ತುಳುನಾಡಿನ ಇತಿಹಾಸವನ್ನು ತುಳು ಭಾಷೆಯೊಂದಿಗೆ ಮುಂದಿನ ಪೀಳಿಗೆಗೆ ತಲುಪಿಸಬೇಕು. ಯುವಜನರಲ್ಲಿ ತುಳು ಭಾಷೆಯ ಬಗ್ಗೆ ಅಭಿಮಾನವಿದ್ದು, ಅವರಿಗೆ ಭಾಷೆಯ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ತುಳು ಭಾಷೆಗೆ ಶತಮಾನಗಳ ಹಿನ್ನೆಲೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇದೆ. ರಾಜ್ಯ ಸರ್ಕಾರ ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಈಗ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ತುಳು ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ವೇದಿಕೆ ಕಲ್ಪಿಸಿ ಸಂಶೋಧನೆಗೆ ಉತ್ತೇಜನ ನೀಡಬೇಕು. ವಿಶ್ವವಿದ್ಯಾನಿಲಯಗಳಲ್ಲಿ ತುಳು ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದರೊಂದಿಗೆ, ತುಳು ಅಧ್ಯಯನ ಮಾಡಿದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಅಕಾಡೆಮಿಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ತುಳು ಭಾಷೆಯ ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಹೇಳಿದರು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವಾ, ತುಳು ಕೇವಲ ಸಂವಹನದ ಭಾಷೆಯಲ್ಲ; ಅದು ತುಳುನಾಡಿನ ಇತಿಹಾಸ, ಸಂಸ್ಕೃತಿ, ಬದುಕು ಮತ್ತು ಜನರ ಅಸ್ಮಿತೆಯ ಪ್ರತೀಕವಾಗಿದೆ ಎಂದರು. ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ ಅವರು, “ಮಾನ್ಯತೆ ಕೇವಲ ಸರ್ಕಾರಿ ಆದೇಶಕ್ಕೆ ಸೀಮಿತವಾಗದೆ, ಆಡಳಿತ ಮತ್ತು ಜನರ ದಿನನಿತ್ಯದ ಬದುಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು” ಎಂದರು.
ಸಭೆಯಲ್ಲಿ ತಜ್ಞರು, ಸಾಹಿತಿಗಳು, ಭಾಷಾ ಹೋರಾಟಗಾರರು ಹಾಗೂ ಗಣ್ಯರಿಂದ ವ್ಯಕ್ತವಾದ ಸಲಹೆಗಳನ್ನು ಕ್ರೋಢೀಕರಿಸಿ ಜನಪರ ಮತ್ತು ಪ್ರಾಯೋಗಿಕ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಈ ನಿರ್ಧಾರದ ಮಹತ್ವವನ್ನು ಜನರಿಗೆ ತಲುಪಿಸುವುದರ ಜೊತೆಗೆ, ಜನರ ಅಭಿಪ್ರಾಯವನ್ನು ಸರ್ಕಾರಕ್ಕೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
“ಭಾಷೆಯನ್ನು ಉಳಿಸುವುದು ಅದನ್ನು ಮಾತನಾಡುವುದರಿಂದ; ಭಾಷೆಯನ್ನು ಬೆಳೆಸುವುದು ಅದಕ್ಕೆ ಅವಕಾಶ ಕಲ್ಪಿಸುವುದರಿಂದ” ಎಂದು ಡಿಸಿಲ್ವಾ ಹೇಳಿದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಅಪ್ಪಿ, ಗಣೇಶ ಪೂಜಾರಿ, ಮೊಹಮ್ಮದ್ ನವಾಜ್, ಹೊನ್ನಯ್ಯ, ಸಾರಿಕಾ ಪೂಜಾರಿ, ಬಶೀರ್ ಬೈಕಂಪಾಡಿ, ಉದಯ ಆಚಾರ್ಯ ಹಾಗೂ ಚಂದ್ರಕಲಾ ರಾವ್ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ರಮಾನಂದ ಪೂಜಾರಿ, ಉದಯ ಕುಂದರ್, ಟಿ.ಕೆ. ಸುಧೀರ್, ಸಂತೋಷ್ ಡಿಕೋಸ್ತಾ, ಭಾರತೇಶ್ ಅಮೀನ್, ಅಶೋಕ್ ಕುಮಾರ್, ಕವಿತಾ ವಾಸು, ವಿಜಯಲಕ್ಷ್ಮಿ, ಶರತ್, ಪದ್ಮನಾಭ ಅಮೀನ್, ಚೇತನ್ ಉರ್ವಾ, ನಾನ್ಸಿ ಡಿಸೋಜಾ, ಹರ್ಬಟ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
“ತುಳು ಭಾಷಾ ಅನುಷ್ಠಾನ ಸಂಕಲ್ಪ–2026” ಅಂಗೀಕಾರ
ಸಭೆಯಲ್ಲಿ ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡುವ ಮಹತ್ವದ ನಿರ್ಧಾರ ಕೈಗೊಂಡ ಕರ್ನಾಟಕ ರಾಜ್ಯ ಸರ್ಕಾರವನ್ನು ಅಭಿನಂದಿಸಲಾಯಿತು. ಮಾನ್ಯತೆ ಕೇವಲ ಸರ್ಕಾರಿ ಆದೇಶ ಮತ್ತು ನಾಮಫಲಕಗಳಿಗೆ ಸೀಮಿತವಾಗದೆ ಆಡಳಿತ, ಜನಸೇವೆ, ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂಬ ಆಶಯದೊಂದಿಗೆ “ತುಳು ಭಾಷಾ ಅನುಷ್ಠಾನ ಸಂಕಲ್ಪ–2026” ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಂಕಲ್ಪದಲ್ಲಿ ಪ್ರಮುಖವಾಗಿ 15 ನಿರ್ಣಯಗಳನ್ನು ಮುಂದಿಡಲಾಗಿದೆ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಕಚೇರಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ತುಳು ಬಳಕೆಗೆ ಸ್ಪಷ್ಟ ಸರ್ಕಾರಿ ಮಾರ್ಗಸೂಚಿ ಮತ್ತು ಸುತ್ತೋಲೆ ಹೊರಡಿಸುವುದು.
ಸಾರ್ವಜನಿಕರು ತುಳುವಿನಲ್ಲಿ ಸಲ್ಲಿಸುವ ಅರ್ಜಿ, ಮನವಿ ಮತ್ತು ದೂರುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸುವುದು.
ಸರ್ಕಾರಿ ಕಚೇರಿಗಳಲ್ಲಿರುವ ತುಳು ಬಲ್ಲ ಸಿಬ್ಬಂದಿಯನ್ನು ಗುರುತಿಸಿ, ಅಗತ್ಯ ತರಬೇತಿ ನೀಡಿ “ತುಳು ಭಾಷಾ ಸಹಾಯಕರು” ಎಂದು ನಿಯೋಜಿಸುವುದು.
ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ಸರ್ಕಾರಿ ಆಸ್ಪತ್ರೆ ಸೇರಿದಂತೆ ಪ್ರಮುಖ ಸಾರ್ವಜನಿಕ ಸೇವಾ ಕಚೇರಿಗಳಲ್ಲಿ ಹಂತ ಹಂತವಾಗಿ ತುಳು ಜನಸೇವಾ ಸಹಾಯ ಕೇಂದ್ರಗಳನ್ನು ಆರಂಭಿಸುವುದು.
ಪಿಂಚಣಿ, ವಿದ್ಯಾರ್ಥಿವೇತನ, ರೇಷನ್ ಕಾರ್ಡ್, ವಸತಿ, ಆರೋಗ್ಯ, ರೈತ, ಕಾರ್ಮಿಕ, ಮಹಿಳೆ ಮತ್ತು ಅಂಗವಿಕಲರ ಯೋಜನೆಗಳ ಮಾಹಿತಿಯನ್ನು ಸರಳ ತುಳು ಮಾಹಿತಿ ಪತ್ರ, ವಿಡಿಯೋ ಮತ್ತು ಧ್ವನಿ ಸಂದೇಶಗಳ ಮೂಲಕ ಜನರಿಗೆ ತಲುಪಿಸುವುದು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸಾರ್ವಜನಿಕ ಮಾಹಿತಿಯನ್ನು ತುಳುವಿನಲ್ಲಿಯೂ ಪ್ರಕಟಿಸುವುದು.
ಸರ್ಕಾರಿ ಕಚೇರಿ, ಆಸ್ಪತ್ರೆ, ರಸ್ತೆ, ಪ್ರವಾಸಿ ತಾಣ ಹಾಗೂ ಹೊಸದಾಗಿ ನಿರ್ಮಿಸುವ ಅಥವಾ ನವೀಕರಿಸುವ ಬಸ್ ನಿಲ್ದಾಣಗಳ ನಾಮಫಲಕಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ತುಳುವನ್ನೂ ಅಳವಡಿಸುವುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ಸ್ವಾಗತ, ನಿರೂಪಣೆ ಅಥವಾ ಕನಿಷ್ಠ ಒಂದು ಭಾಗವನ್ನು ತುಳುವಿನಲ್ಲಿ ನಡೆಸುವುದು ಹಾಗೂ ಗ್ರಾಮಸಭೆ, ವಾರ್ಡ್ ಸಭೆ ಮತ್ತು ಸಾರ್ವಜನಿಕ ಕುಂದುಕೊರತೆ ಸಭೆಗಳಲ್ಲಿ ಜನರಿಗೆ ತುಳುವಿನಲ್ಲಿ ಮಾತನಾಡಲು ಅವಕಾಶ ಕಲ್ಪಿಸುವುದು.
ಶಾಲೆ–ಕಾಲೇಜುಗಳ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ವಾಗತ, ವಂದನಾರ್ಪಣೆ, ಭಾಷಣ, ಹಾಡು, ನೃತ್ಯ ಅಥವಾ ಕಿರು ನಾಟಕಗಳಲ್ಲಿ ಕನಿಷ್ಠ ಒಂದನ್ನು ತುಳುವಿನಲ್ಲಿ ನಡೆಸಲು ಪ್ರೋತ್ಸಾಹಿಸುವುದು.
ಆಸಕ್ತ ವಿದ್ಯಾರ್ಥಿಗಳಿಗೆ ತುಳುವನ್ನು ಐಚ್ಛಿಕ ಭಾಷೆ ಅಥವಾ ವಿಷಯವಾಗಿ ಕಲಿಯಲು ಅವಕಾಶ ಕಲ್ಪಿಸಿ, ಸೂಕ್ತ ಪಠ್ಯಕ್ರಮ ರೂಪಿಸುವುದು. ತುಳು ಶಿಕ್ಷಕರಿಗೆ ತರಬೇತಿ ನೀಡಿ ಪಠ್ಯಪುಸ್ತಕ, ಕಥೆಪುಸ್ತಕ, ನಿಘಂಟು ಹಾಗೂ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು.
ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಶಾಲೆ–ಕಾಲೇಜುಗಳಿಗೆ “ತುಳು ಭಾಷಾ ಪ್ರೋತ್ಸಾಹಕ ಶಿಕ್ಷಣ ಸಂಸ್ಥೆ” ಗೌರವ ಹಾಗೂ ಅಗತ್ಯ ಅನುದಾನ ನೀಡುವುದು. ತುಳು ಭಾಷೆ, ಸಾಹಿತ್ಯ, ಜನಪದ ಮತ್ತು ಸಂಶೋಧನೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು.
ವಿಶ್ವವಿದ್ಯಾಲಯಗಳಲ್ಲಿ ತುಳು ಅಧ್ಯಯನ ಪೀಠ, ಸ್ನಾತಕೋತ್ತರ ಶಿಕ್ಷಣ, ಪಿಎಚ್.ಡಿ., ಸಂಶೋಧನೆ ಮತ್ತು ದಾಖಲೀಕರಣಕ್ಕೆ ಹೆಚ್ಚಿನ ಅನುದಾನ ನೀಡಿ, ತುಳು ಡಿಜಿಟಲ್ ಗ್ರಂಥಾಲಯ, ಭಾಷಾ ಪ್ರಯೋಗಾಲಯ, ಕೀಬೋರ್ಡ್, ಮೊಬೈಲ್ ಆ್ಯಪ್, ಅನುವಾದ ತಂತ್ರಾಂಶ ಹಾಗೂ ಧ್ವನಿ–ಪಠ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
ತುಳು ಪುಸ್ತಕ, ನಾಟಕ, ಸಿನಿಮಾ, ಯಕ್ಷಗಾನ, ಪಾಡ್ದನ, ಜನಪದ ಕಲೆ ಹಾಗೂ ಡಿಜಿಟಲ್ ವಿಷಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ, ತುಳು ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ನೋಂದಾಯಿತ ಸಂಘಟನೆಗಳು ಹಾಗೂ ಹಿರಿಯ ತುಳು ಸಾಹಿತಿ–ಕಲಾವಿದರಿಗೆ ಸೂಕ್ತ ನೆರವು ಮತ್ತು ಗೌರವ ನೀಡುವುದು.
ತುಳು ಭಾಷೆಯ ಅನುಷ್ಠಾನವನ್ನು ಯೋಜಿಸಲು, ಸಮನ್ವಯಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು “ತುಳು ಭಾಷಾ ಅನುಷ್ಠಾನ ಮತ್ತು ಸಮನ್ವಯ ಪ್ರಾಧಿಕಾರ” ರಚಿಸುವುದು. ಜಿಲ್ಲಾ ಮಟ್ಟದ ಸಲಹಾ ಸಮಿತಿ ಮತ್ತು ಸ್ವಯಂಸೇವಕರ ತಂಡ ರಚಿಸಿ, ಪ್ರತಿವರ್ಷ ತುಳು ಭಾಷಾ ದಿನ ಹಾಗೂ ತುಳು ಭಾಷೆ–ಸಂಸ್ಕೃತಿ ಉತ್ಸವ ಆಯೋಜಿಸುವುದು. ಮಂಗಳೂರಿನ ಕರಾವಳಿ ಉತ್ಸವವನ್ನು **“ತುಳು–ಕರಾವಳಿ ಉತ್ಸವ”**ವಾಗಿ ರೂಪಿಸುವುದು.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ, ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವ ಸಲ್ಲಿಸುವುದು. ರಾಜ್ಯದ ಸಂಸದರು ಪಕ್ಷಭೇದ ಮರೆತು ಸಂಸತ್ತಿನಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತುವಂತೆ ಒತ್ತಾಯಿಸುವುದು.
ಅಂತಿಮ ನಿರ್ಣಯ
ಮೊದಲ ಹಂತದಲ್ಲಿ ಹೆಚ್ಚುವರಿ ಆರ್ಥಿಕ ಹೊರೆ ಇಲ್ಲದೆ ಈಗಿರುವ ಸಿಬ್ಬಂದಿ ಮತ್ತು ಇಲಾಖಾ ಸಂಪನ್ಮೂಲಗಳನ್ನು ಬಳಸಿಕೊಂಡು ಅನುಷ್ಠಾನಗೊಳಿಸಬಹುದಾದ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು. ಅನುದಾನ, ಹೆಚ್ಚುವರಿ ಸಿಬ್ಬಂದಿ ಮತ್ತು ಮೂಲಸೌಕರ್ಯ ಅಗತ್ಯವಿರುವ ಯೋಜನೆಗಳಿಗೆ ಕಾಲಮಿತಿಯ ಕ್ರಿಯಾಯೋಜನೆ ರೂಪಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕು ಎಂದು ಸಭೆ ಒತ್ತಾಯಿಸಿತು.
“ತುಳು ಭಾಷೆಯ ಮಾನ್ಯತೆ ಕೇವಲ ಸರ್ಕಾರಿ ಆದೇಶ ಮತ್ತು ನಾಮಫಲಕಕ್ಕೆ ಸೀಮಿತವಾಗದೆ, ಗ್ರಾಮದ ಸಾಮಾನ್ಯ ಜನರಿಗೆ ಸರ್ಕಾರಿ ಸೇವೆ ಮತ್ತು ಸೌಲಭ್ಯಗಳನ್ನು ತಲುಪಿಸುವ ಜನಸೇವೆಯ ಭಾಷೆಯಾಗಬೇಕು” ಎಂಬ ಆಶಯದೊಂದಿಗೆ “ತುಳು ಭಾಷಾ ಅನುಷ್ಠಾನ ಸಂಕಲ್ಪ–2026” ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
