ಪುತ್ತೂರು: ಬಹುನಿರೀಕ್ಷಿತ ಬೆಂಗಳೂರು- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆ.11 ರಂದು ಮತ್ತೆ ನಡೆಯಲಿದೆ. ಈ ಮೂಲಕ ಬಂದರು ನಗರಿಯಿಂದ ಸಿಲಿಕಾನ್ ಸಿಟಿಯ ವಂದೇ ಭಾರತ್ ಕನಸು ಮತ್ತೆ ಚಿಗೊರೆಡೆದಿದೆ.

ಆ.11ರಂದು ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಶಿರಾಡಿ ಘಾಟಿಯಲ್ಲಿ ಈ ವಂದೇ ಭಾರತ್ ರೈಲು ಮೊದಲ ಬಾರಿಗೆ ಪ್ರಾಯೋಗಿಕ ಸಂಚಾರ ನಡೆಸಲಿದೆ. ಈ ಮೊದಲು 2 ಬಾರಿ ಪ್ರಾಯೋಗಿಕ ಸಂಚಾರಕ್ಕೆ ಆರಂಭಿಸಲಾಗಿತ್ತಾದರೂ, ರೈಲು ಗಾಡಿಯ ಅಲಭ್ಯತೆಯಿಂದಾಗಿ ಅದು ಈಡೇರಿರಲಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಮುದಿತ್ ಮಿತ್ತಲ್ ಮಾಹಿತಿ ನೀಡಿ “ಆ.11ರಂದು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ. ಇದು ಕೇವಲ ತಾಂತ್ರಿಕ ಆಭ್ಯಾಸಕ್ಕಾಗಿ ಮಾತ್ರ. ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಸುರಕ್ಷತಾ ಸಂಸ್ಥೆಯ ತಂಡ ಆಗಮಿಸಿ ಕಾರ್ಯಕ್ಷಮತೆ ಬಗ್ಗೆ ಪರಿಶೀಲನೆ ನಡೆಸಲಿದೆ” ಎಂದಿದ್ದಾರೆ.
ಇದೀಗ 20 ಬೋಗಿಗಳ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರಕ್ಕೆ ಸಿದ್ಧವಾಗಿದ್ದು, ಘಾಟಿಗಳಲ್ಲಿ ಸಂಚರಿಸಲು ಅನುಕೂಲವಾಗುವಂಥ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ) ವ್ಯವಸ್ಥೆ ಇರುವ ರೈಲು ಗಾಡಿಯನ್ನು ಚೆನ್ನೈನಲ್ಲಿ ತಯಾರಿಸಿ ಸಜ್ಜುಗೊಳಿಸಲಾಗಿದೆ. ಈ ಗಾಡಿಯನ್ನು ಆ.11ರಂದು ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ಪ್ರಾಯೋಗಿಕವಾಗಿ ಓಡಿಸಲು ನಿರ್ಧರಿಸಲಾಗಿದೆ. ಘಾಟಿ ಸೆಕ್ಷನ್ ಹಳಿಯಲ್ಲಿ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಜೂನ್ ವೇಳೆಗೆ ನಡೆಯಬೇಕಿತ್ತು. ಆದರೆ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ) ವ್ಯವಸ್ಥೆ ಇರುವ ರೈಲು ಬಂಡಿ ಸಿದ್ಧವಾಗದ ಕಾರಣ ಕಾರ್ಯರೂಪಕ್ಕೆ ಬಂದಿರಲಿಲ್ಲ.
