LATEST NEWS

ಕೊಣಾಜೆ: ತಾಲ್ಲೂಕು ಮಟ್ಟದ ಫುಟ್ಬಾಲ್ ಕ್ರೀಡಾಕೂಟ ಯಶಸ್ವಿ; ಉಳ್ಳಾಲದ ಶಾಲೆಗಳಿಗೆ ಅಗ್ರಸ್ಥಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ (ಮಂಗಳೂರು ದಕ್ಷಿಣ ವಲಯ) ಹಾಗೂ ನಾಟೇಕಲ್ ಉರುಮನೆಯ ಅಲಿಫ್ ಪಬ್ಲಿಕ್ ಶಾಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ–ಬಾಲಕಿಯರ ಫುಟ್ಬಾಲ್ ಪಂದ್ಯಾಟ–2026 ಇತ್ತೀಚೆಗೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.

ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟವನ್ನು ಅಲಿಫ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಹುಸೈನ್ ಅವರು ಫುಟ್ಬಾಲ್ ಒದೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮುಹಮ್ಮದ್ ಇಕ್ಬಾಲ್, ದಕ್ಷಿಣ ವಲಯ ದೈಹಿಕ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ಶಿರ್ಲಾಲ್ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ 14ರ ವಯೋಮಿತಿಯ 28 ಬಾಲಕರ ತಂಡಗಳು, 17ರ ವಯೋಮಿತಿಯ 32 ಬಾಲಕರ ತಂಡಗಳು ಹಾಗೂ ಬಾಲಕಿಯರ ವಿಭಾಗದ 14ರ ವಯೋಮಿತಿಯ 2 ಮತ್ತು 17ರ ವಯೋಮಿತಿಯ 5 ತಂಡಗಳು ಸೇರಿದಂತೆ ಒಟ್ಟು 67 ತಂಡಗಳು ಭಾಗವಹಿಸಿ ಕಟು ಪೈಪೋಟಿ ನಡೆಸಿದವು.

ರೋಮಾಂಚಕ ಫಲಿತಾಂಶಗಳು:

* 14 ವರ್ಷದೊಳಗಿನ ಬಾಲಕಿಯರು: ಸೇಂಟ್ ಜೋಸೆಫ್ ಜಾಯ್‌ಲ್ಯಾಂಡ್ ಶಾಲೆ ಪ್ರಥಮ ಸ್ಥಾನ ಹಾಗೂ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡವು.

* 14 ವರ್ಷದೊಳಗಿನ ಬಾಲಕರು: ಉಳ್ಳಾಲದ ಹಜರತ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಜೆಪ್ಪುವಿನ ಸೇಂಟ್ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

* 17 ವರ್ಷದೊಳಗಿನ ಬಾಲಕರು: ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಹಾಗೂ ಉಳ್ಳಾಲದ ಹಜರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡವು.

ವಿಜೇತ ತಂಡಗಳಿಗೆ ಅಲಿಫ್ ಶಾಲೆಯ ವ್ಯವಸ್ಥಾಪಕರಾದ ಶ್ರೀ ಜನಾಬ್ ಮುಹಮ್ಮದ್ ಹುಸೈನ್ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಿದರು. ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದ ಕ್ರೀಡಾಪಟುಗಳು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪ್ರತಿಯೊಬ್ಬರಿಗೂ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮುಹಮ್ಮದ್ ಇಕ್ಬಾಲ್ ಧನ್ಯವಾದ ಸಮರ್ಪಿಸಿದರು.

Share News