ಪುತ್ತೂರು: ಬಿರುಮಲೆ ಬೆಟ್ಟಕ್ಕೆ ಬಂದಿದ್ದ ಯುವಕ-ಯುವತಿ ಮೇಲೆ ಕಿಡಿಗೇಡಿಗಳಿಂದ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬ ವಿಚಾರ ನನ್ನಗಮನಕ್ಕೆ ಬಂದಿದ್ದು, ಆರೋಪಿತರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪುತ್ತೂರು ಶಾಸಕ ಅಶೋಕ್ ರೈ ಪೊಲೀಸರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಘಟನೆಗೆ ಸಂಬಂಧಿಸಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸಮಯಗಳಿಂದ ನಿಂತು ಹೋಗಿದ್ದ ಈ ರೀತಿಯ ಕೆಟ್ಟ ಘಟನೆಗಳು ಪುತ್ತೂರಿನಲ್ಲಿ ನಡೆದಿದೆ. ಬಾಲ ಮುದುಡಿಕೊಂಡಿದ್ದ ಸಮಾಜಘಾತುಕ ಕಿಡಿಗೇಡಿಗಳ ಬಾಲ ಕತ್ತರಿಸುವ ಕೆಲಸ ಮಾಡಲಾಗುತ್ತದೆ. ಇಂಥವರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ.
ವಿಹಾರಕ್ಕೆ ಬರುವ ಮಂದಿಗೆ ರಕ್ಷಣೆ ನೀಡುವ ಕೆಲಸ ಪೊಲೀಸರು ಮಾಡಲಿದ್ದಾರೆ. ಬಿರುಮಲೆ ಬೆಟ್ಟದಲ್ಲಿ ಪೊಲೀಸ್ ರಕ್ಷಣೆಗೆ ಸೂಚನೆಯನ್ನು ನೀಡಿದ್ದು ಮಾತ್ರವಲ್ಲದೆ ಇನ್ನು ಮುಂದೆ ಈ ರೀತಿಯ ನೈತಿಕ ಪೊಲೀಸ್ ಗಿರಿ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿರುವುದಾಗಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.