ಮಂಗಳೂರು: ನಗರದ ಕೊಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟರ ಭವನದ ಬಳಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಂಗಳೂರು ಪೊಲೀಸರು ಮಂಗಳವಾರ ದಿಢೀರ್ ಡ್ರಗ್ಸ್ ಪರೀಕ್ಷೆ ನಡೆಸಿದ್ದಾರೆ.

ಕೊಟೆಕಾರ್ ಬೀರಿ (ಉಳ್ಳಾಲ ವ್ಯಾಪ್ತಿ): ಪರ ಕಾಲೇಜು, ನಿಟ್ಟೆ ಕೆ.ಎಸ್.ಹೆಗ್ಡೆ, ಸೈಂಟ್ ಅಲೋಶಿಯಸ್, ಪಿಎ ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಇವರಲ್ಲಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಗೆ ಡ್ರಗ್ಸ್ ಸೇವನೆ ಪಾಸಿಟಿವ್ ಕಂಡುಬಂದಿದೆ. ಕೊಣಾಜೆ ಪಿಎ ಕಾಲೇಜಿನ ಎರಡು ಬಸ್‌ಗಳನ್ನು ತಡೆದು ಒಟ್ಟು 87 ವಿದ್ಯಾರ್ಥಿಗಳನ್ನು ಪರಿಶೀಲಿಸಲಾಯಿತು. ಇಲ್ಲಿ ಎಲ್ಲಾ ವಿದ್ಯಾರ್ಥಿಗಳ ವರದಿಯೂ ನೆಗೆಟಿವ್ ಬಂದಿದೆ.ಸಂಜೆ 4:30 ರಿಂದ 6:00 ರವರೆಗೆ ಈ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಉಸ್ತುವಾರಿಯಲ್ಲಿ, ದಕ್ಷಿಣ ಹಾಗೂ ಸೆಂಟ್ರಲ್ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಸಾರ್ವಜನಿಕ ಹಾಗೂ ಕಾಲೇಜು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ತಡೆದು ಮಲ್ಟಿ-ಡ್ರಗ್ ಟೆಸ್ಟಿಂಗ್ ಕಿಟ್ ಮೂಲಕ ಸ್ಥಳದಲ್ಲೇ ಪರೀಕ್ಷೆಗೆ ಒಳಪಡಿಸಲಾಯಿತು.
ಪರೀಕ್ಷೆಯ ಮುಂದಿನ ಕ್ರಮ: ಪರೀಕ್ಷೆಗೊಳಪಟ್ಟ ನೂರಾರು ವಿದ್ಯಾರ್ಥಿಗಳಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಪಾಸಿಟಿವ್ ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮಾದಕದ್ರವ್ಯ ಸೇವಿಸುವ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತಿದೆಯಾದರೂ, ಈ ಪಿಡುಗನ್ನು ಸಂಪೂರ್ಣವಾಗಿ ತಡೆಯಲು ಇನ್ನೂ ಹೆಚ್ಚಿನ ಕ್ರಮಗಳ ಅಗತ್ಯವಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಡ್ರಗ್ಸ್ ಪಾಸಿಟಿವ್ ಬಂದಿರುವ ವಿದ್ಯಾರ್ಥಿಯ ವಿರುದ್ಧ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಕೌನ್ಸಿಲಿಂಗ್ (ಸಮಾಲೋಚನೆ)ಗೆ ಕಳುಹಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.