ಮೈಸೂರು: ಡೋರ್ನಹಳ್ಳಿಯ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವದ ಅಂಗವಾಗಿ ಮೂರನೇ ದಿನದ ನೊವೆನಾ ಪ್ರಾರ್ಥನಾ ಕಾರ್ಯಕ್ರಮವು ಶನಿವಾರ (ಜೂನ್ 6) ಡೋರ್ನಹಳ್ಳಿಯ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.

ಮೈಸೂರಿನ ಬೋಗಾದಿಯ ‘ಧ್ಯಾನ ಸಾಧನ’ ಸಂಸ್ಥೆಯ ವಂದನೀಯ ಫಾದರ್ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ (OCD) ಅವರು ಪವಿತ್ರ ಬಲಿಪೂಜೆಯ ಮುಖ್ಯ ಕಾರ್ಮಿಕರಾಗಿ ಭಾಗವಹಿಸಿದ್ದರು. ಡೋರ್ನಹಳ್ಳಿ ಬೆಸಿಲಿಕಾದ ರೆಕ್ಟರ್ ವಂದನೀಯ ಫಾದರ್ ಡೇವಿಡ್ ಸಗಾಯರಾಜ್ ಮತ್ತು ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಪೆದ್ರು ಅವರು ಬಲಿಪೂಜೆಯಲ್ಲಿ ಜೊತೆಯಾಗಿದ್ದರು.
ಈ ಸಂದರ್ಭದಲ್ಲಿ ಪ್ರವಚನ ನೀಡಿದ ವಂದನೀಯ ಫಾದರ್ ಆರ್ಚಿಬಾಲ್ಡ್ ಅವರು, “ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಸಂತ ಅಂತೋನಿಯವರ ಮಧ್ಯಸ್ಥಿಕೆಯ ಮೂಲಕ ದೇವರ ಕೃಪೆ ಮತ್ತು ರಕ್ಷಣೆಯ ಮೇಲೆ ಸಂಪೂರ್ಣ ಭರವಸೆ ಇಡಬೇಕು” ಎಂದು ಭಕ್ತರಿಗೆ ಕರೆ ನೀಡಿದರು.
ಪವಿತ್ರ ಬಲಿಪೂಜೆಯ ನಂತರ ಭಕ್ತಾದಿಗಳ ವಿವಿಧ ಉದ್ದೇಶಗಳಿಗಾಗಿ ಸಂತ ಅಂತೋನಿಯವರ ವಿಶೇಷ ನೊವೆನಾ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಳಿಕ ಸಂತ ಅಂತೋನಿಯವರ ಪವಿತ್ರ ಮೂರ್ತಿಯ ಭವ್ಯ ಮೆರವಣಿಗೆ ಹಾಗೂ ಪರಮ ಪ್ರಸಾದದ ಆಶೀರ್ವಾದದೊಂದಿಗೆ ಮೂರನೇ ದಿನದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು. ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿದ್ದ ನೂರಾರು ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.