canaratvnews

ಮೈಸೂರಿನ ಡೊರ್ನಹಳ್ಳಿ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ಎಂಟನೇ ದಿನದ ನೊವೇನಾ ಭಕ್ತಿ ಆಚರಣೆ

ಮೈಸೂರು, ಜೂನ್ 11: ಡೊರ್ನಹಳ್ಳಿಯ ಪ್ರಸಿದ್ಧ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಪೂರ್ವಭಾವಿ ನೊವೇನಾ ಪ್ರಾರ್ಥನೆಯ ಎಂಟನೇ ದಿನದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಭಕ್ತಿ ಶ್ರದ್ಧೆಯಿಂದ ನೆರವೇರಿಸಲಾಯಿತು.

ಈ ಪವಿತ್ರ ದಿವ್ಯ ಬಲಿಪೂಜೆಯ ನೇತೃತ್ವವನ್ನು ಹೆಚ್.ಡಿ. ಕೋಟೆಯ ಸಂತ ಮೇರಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಬರ್ನಾರ್ಡ್ ಪ್ರಕಾಶ್ ಬರ್ನಿಸ್ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಬೆಸಿಲಿಕಾದ ರೆಕ್ಟರ್ ವಂದನೀಯ ಫಾದರ್ ಡೇವಿಡ್ ಸಗಾಯರಾಜ್ ಮತ್ತು ಬೆಸಿಲಿಕಾದ ಅಡ್ಮಿನಿಸ್ಟ್ರೇಟರ್ ವಂದನೀಯ ಫಾದರ್ ಪ್ರವೀಣ್ ಪೆದ್ರು ಅವರು ಸಹ-ಬಲಿಪೂಜೆ ನೆರವೇರಿಸಿದರು

ಬಲಿಪೂಜೆಯ ಪ್ರವಚನ ನೀಡಿದ ಫಾದರ್ ಬರ್ನಾರ್ಡ್ ಪ್ರಕಾಶ್ ಬರ್ನಿಸ್ ಅವರು, “ಪ್ರತಿಯೊಬ್ಬ ಕ್ರೈಸ್ತನೂ ತನ್ನ ಜೀವನದಲ್ಲಿ ನಂಬಿಕೆ ಮತ್ತು ದೃಢತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಕ್ರೈಸ್ತ ಸಾಕ್ಷಿ ಜೀವನ ನಡೆಸುವುದು ಇಂದಿನ ಅಗತ್ಯವಾಗಿದೆ. ಭಕ್ತರು ಸದಾ ದೇವರ ಪ್ರೀತಿ ಮತ್ತು ಕರುಣೆಯಲ್ಲಿ ನೆಲೆಸಿರಬೇಕು” ಎಂದು ಕರೆ ನೀಡಿದರು.

ಪವಿತ್ರ ಬಲಿಪೂಜೆಯ ನಂತರ, ನೆರೆದಿದ್ದ ಸಹಸ್ರಾರು ಭಕ್ತರ ವಿವಿಧ ಉದ್ದೇಶ ಹಾಗೂ ಆಸೆಗಳಿಗಾಗಿ ಸಂತ ಅಂತೋನಿಯವರಲ್ಲಿ ವಿಶೇಷ ನೊವೇನಾ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ತದನಂತರ ಸಂತ ಅಂತೋನಿಯವರ ಪವಿತ್ರ ಮೂರ್ತಿಯ ಭವ್ಯ ಮೆರವಣಿಗೆಯನ್ನು ಚರ್ಚಿನ ಆವರಣದಲ್ಲಿ ನಡೆಸಲಾಯಿತು. ಪರಮ ಪ್ರಸಾದದ ಆಶೀರ್ವಾದದೊಂದಿಗೆ ಇಡೀ ದಿನದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ವಾರ್ಷಿಕ ಮಹೋತ್ಸವದ ದಿನಗಳು ಹತ್ತಿರವಾಗುತ್ತಿರುವುದರಿಂದ ದೇಶದ ನಾನಾ ಭಾಗಗಳಿಂದ ಭಕ್ತರು ಮತ್ತು ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಸಿಲಿಕಾಕ್ಕೆ ಆಗಮಿಸುತ್ತಿದ್ದಾರೆ.

Share News
Exit mobile version