ಮಂಗಳೂರು: ಸೇಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಸೆಂಟ್ರಲ್ ಕೌನ್ಸಿಲ್ ತನ್ನ 66 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಬೆಂದೂರು ಕಾನ್ಫರೆನ್ಸ್‌ನ ಪ್ರೀತಾ ಲೋಬೊ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ಅಧ್ಯಕ್ಷರಿಗೆ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫ್ಲೇವಿಯನ್ ಲೋಬೊ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಬೆಂದೂರು ಚರ್ಚ್‌ನ ಧರ್ಮಗುರುಗಳಾದ ವಂದನೀಯ ವಾಲ್ಟರ್ ಡಿಸೋಜಾ ಮತ್ತು ಮಾಜಿ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫ್ರಾನ್ಸಿಸ್ ಡಿಸೋಜಾ ಉಪಸ್ಥಿತರಿದ್ದು ಶುಭ ಹಾರೈಸಿದರು.

ನಿರ್ಗಮಿತ ಅಧ್ಯಕ್ಷರಾದ ಬ್ರದರ್ ಜ್ಯೊ ಕುವೆಲ್ಲೊ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಹಕರಿಸಿದ ಕಾರ್ಯದರ್ಶಿ ಬ್ರದರ್ ಲಿಗೋರಿ ಫೆರ್ನಾಂಡಿಸ್, ಕೋಶಾಧಿಕಾರಿ ಬ್ರದರ್ ಕ್ಲೆರೆನ್ಸ್ ಮಚಾದೊ ಮತ್ತು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷರಿಗೆ ತಮ್ಮ ಪೂರ್ಣ ಬೆಂಬಲದ ಭರವಸೆಯನ್ನು ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೀತಾ ಲೋಬೊ ಅವರು, ಈ ಜವಾಬ್ದಾರಿಯುತ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಸಂಸ್ಥೆಯ ಸೇವಾ ಕಾರ್ಯಗಳನ್ನು ಮುಂದುವರಿಸಲು ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದು ಅವರು ಮನವಿ ಮಾಡಿದರು.

