ಮಂಗಳೂರು: ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಠೇವಣಿದಾರರ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕೊಡಿಯಾಲ್‌ಬೈಲ್‌ನ ಕೆನರಾ ಹೈಸ್ಕೂಲ್ ಆವರಣದಲ್ಲಿರುವ ಶ್ರೀ ಸುಧೀಂದ್ರ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಶ್ರೀ ಪ್ರಸನ್ನ ಕುಮಾರ್ ಪಕ್ಕಳ ಇವರನ್ನು ಅವರ ಗಣನೀಯ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.

ನಂತರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅಂಬರೀಶ ಯು.ಕೆ. ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮೀಶ ಎನ್. ಅವರು ಕಾರ್ಯಸೂಚಿಗಳನ್ನು ಸಭೆಯ ಮುಂದಿಟ್ಟು ಮಂಡಿಸಿದರು. ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ 2025-26ನೇ ಸಾಲಿನ ಲಾಭಾಂಶದ ಮೇಲೆ ಡಿವಿಡೆಂಡ್ ಘೋಷಣೆ ಮಾಡಲಾಯಿತು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಮಾಲತೇಶ ಹೆಗ್ಗಪ್ಪ ಲಾಠಿ, ನಿರ್ದೇಶಕರುಗಳಾದ ಅಕ್ಷಯ ಭಂಡಾರ್ಕರ್, ಜ್ಯೋತಿಪ್ರಕಾಶ್, ಯು. ಪಾಂಡುರಂಗ, ಪದ್ಮನಾಭ ಜೋಗಿ, ಪ್ರಕಾಶ್ ನಾಯಕ್, ಪ್ರವೀಣ್ ಎಸ್., ವಿಶಾಲಾಕ್ಷಿ ಎನ್.ಟಿ., ಶಶಿಕಲಾ, ಸಬಿತಾ ಸೆರಾವೊ ಸೇರಿದಂತೆ ಬ್ಯಾಂಕಿನ ಅಪಾರ ಸಂಖ್ಯೆಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
