ಮಂಜೇಶ್ವರ: ಮಗನೊಬ್ಬ ಬೆಂಕಿ ಹಚ್ಚಿ ತಾಯಿಯನ್ನು ಕೊಲೆಗೈದ ಘಟನೆ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಯೊಳಗೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ವರ್ಕಾಡಿ ನಲ್ಲಂಗಿಯ ದಿ. ಲೂಯಿಸ್ ಮೊಂತೆರೋ ರವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ನಡೆಸಿದ್ದಾನೆ. ನೆರೆಮನೆಯ ಲೋಲಿಟಾ (30) ಗಂಭೀರ ಗಾಯಗೊಂಡಿದ್ದಾರೆ.
ಘಟನೆ ವಿವರ
ನಿನ್ನೆ ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆಸಿದ್ದಾನೆ ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ. ತಾಯಿ ಮೃತ ದೇಹ ಮನೆಯ ಹಿಂಭಾಗದ ಪೊದರುಗಳಡೆಯಲ್ಲಿ ದೊರೆತಿದೆ. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಆರೋಪಿ ಮೇಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದು, ಕೊಲೆ ಕೃತ್ಯಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ.
ಆರೋಪಿಯನ್ನು ಪತ್ತೆ ಹಚ್ಚಿದ್ದು ರೋಚಕ
ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದನು, ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಮಂಜೇಶ್ವರ ಠಾಣಾ ಪೊಲೀಸರು ಆತನ ಮೊಬೈಲ್ ಟ್ರೇಸ್ ಮಾಡತೊಡಗಿದ್ದಾರೆ. ಈ ವೇಳೆ ಆತನ ಬಳಿ ಇದ್ದ ಮೊಬೈಲ್ ಕ್ಷಣಕ್ಕೊಮ್ಮೆ ಸ್ವಿಚ್ ಆಫ್-ಸ್ವಿಚ್ ಆನ್ ಆಗುತ್ತಿತ್ತು. ಇದರಿಂದ ಮೊಬೈಲ್ ಟ್ರೇಸ್‌ಗಿಳಿದ ಪೊಲೀಸರಿಗೆ ಆತನ ಉಡುಪಿ ಕಡೆಗೆ ತೆರಳಿದ್ದು ತಿಳಿದಿದೆ.
ಈ ವೇಳೆ ಬೆನ್ನುಬಿಡದ ಪೊಲೀಸರು ಆತ ಬೈಂದೂರಿನಲ್ಲಿ ಕೊನೆಯ ಬಾರಿ ಸ್ವಿಚ್ ಆನ್ ಮಾಡಿದಾಗ ಸ್ಥಳೀಯ ಪೊಲೀಸರ ಸಹಕಾರದಿಂದ ಸ್ಥಳಕ್ಕೆ ತಲುಪಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕೊಲ್ಲಿ ರಾಷ್ಟ್ರದಲ್ಲಿದ್ದ ಕಿರಿಯ ಮಗ ಆಗಮಿಸುತ್ತಿದ್ದಂತೆ ಅಂತಿಮ ವಿಧಿ ವಿಧಾನ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮನೆಯಲ್ಲಿ ಕಾಲ ಕಳೆದಿದ್ದ ಪಾಪಿ ಮಗ
ತಾಯಿಯನ್ನು ಕೊಂದು ಅತ್ತೆಯನ್ನು ಕೊಲ್ಲಲು ಯತ್ನಿಸಿದ ಪಾಪಿ ಮೆಲ್ವಿನ್ ರಾತ್ರಿ ಇಡೀ ಮನೆಯಲ್ಲಿ ಕಾಲ ಕಳೆದಿದ್ದಾನೆ. ಬಳಿಕ ಬೆಳಗ್ಗೆ ವಿಚಾರ ಊರಿನವರಿಗೆ ತಿಳಿಯುತ್ತಲೆ ಒಬ್ಬೊಬ್ಬರೆ ಅಲ್ಲಿಗೆ ಬಂದಿದ್ದಾರೆ. ಅಲ್ಲಿಂದ ಮೆಲ್ವಿನ್ 2 ಕಿಲೋಮೀಟರ್ ಓಡಿ ಹೋಗಿ ಆಟೋ ಹಿಡಿದು ಹೊಸಂಗಡಿಗೆ ತಲುಪಿದ್ದಾನೆ. ಬಳಿಕ ಮಂಗಳೂರು ಬಸ್ ಹತ್ತಿ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ನಲ್ಲಿ ಇಳಿದಿದ್ದಾನೆ. ಅಲ್ಲಿಂದ ಕುಂದಾಪುರ ಬಸ್ ಹತ್ತಿ ಬೈಂದೂರು ತಲುಪಿದ್ದಾನೆ.
ಮೆಲ್ವಿನ್ ಅರ್ಥ್ ಮೂವರ್ಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಬೈಂದೂರು ಸುತ್ತಾಮುತ್ತಾ ಕಲ್ಲಿನಕೋರೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ. ಆದ್ರಿಂದ ಆ ಜಾಗಕ್ಕೆ ಹೋಗಲು ಆತನ ಇಲ್ಲಿಗೆ ಬಂದಿದ್ದ. ಇನ್ನು ಒಂದು ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ಬೈಂದೂರು ಪೊಲೀಸರ ಸಹಕಾರದಿಂದ ಕೇರಳ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿ ಮೆಲ್ವಿನ್ ಮೊಂತೇರೋ ಏನು ಬಾಯಿ ಬಿಡುತ್ತಿಲ್ಲ. ನನಗಿನ್ನು ಮದುವೆ ಆಗಿಲ್ಲ ಅಂತಷ್ಟೆ ಪೊಲೀಸರಿಗೆ ಹೇಳಿದ್ದಾನೆ ಎನ್ನುವುದು ತಿಳಿದು ಬಂದಿದೆ. ಇನ್ನು ಪೊಲೀಸರ ವಿಚಾರಣೆಯಲ್ಲಿ ಅಸಲಿ ಕಾರಣ ತಿಳಿದು ಬರಲಿದೆ.
ಅತ್ತೆಯನ್ನು ಕೊಲ್ಲಲು ಮುಂದಾಗಿದ್ದ, ಆಕೆ ಜಸ್ಟ್ ಎಸ್ಕೇಪ್
ತಾಯಿ ಹಿಲ್ಡಾಳ ಪಕ್ಕದ ಮನೆಯಲ್ಲಿ ಹಿಲ್ಡಾಳ ತಮ್ಮ ವಿಕ್ಟರ್ ಮನೆ ಇತ್ತು. ವಿಕ್ಟರ್ ವಿದೇಶದಲ್ಲಿ ಕೆಲಸದಲ್ಲಿದ್ದು, ಆತನ ಪತ್ನಿ 30 ವರ್ಷದ ಲೊಲಿಟಾ ತನ್ನ 5 ವರ್ಷದ ಮಗುವಿನೊಂದಿಗೆ ವಾಸವಿದ್ದಳು. ತಾಯಿಯನ್ನು ಕೊಂದ ನಂತರ ಮೆಲ್ವಿನ್ ತನ್ನ ಅತ್ತೆ ಲೊಲಿಟಾ ಮನೆಯ ಬಾಗಿಲು ಬಡಿದಿದ್ದಾನೆ.
ಲೊಲಿಟಾಳಿಗೆ ತನ್ನ ತಾಯಿಗೆ ಹುಷಾರಿಲ್ಲ. ಸೀರಿಯಸ್ ಆಗಿದ್ದಾಳೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಲೊಲಿಟಾ ಮಗಲಿದ್ದ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಓಡೋಡಿ ಬಂದಿದ್ದಾಳೆ. ಮನೆಗೆ ಬಂದ ಲೊಲಿಟಾಳಿಗೆ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.
ಆಗ ಅಲ್ಲಿಂದಲೊಲಿಟಾ ತಪ್ಪಿಸಿಕೊಂಡು ಕಾಡಿಗೆ ಓಡಿದ್ದಾಳೆ. ಮುಂಜಾನೆ 5 ಗಂಟೆಗೆ ಒಂದು ಮನೆ ಬಳಿ ಹೋದಾಗ ಅಲ್ಲಿಯವರು ನೋಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಸಿದ್ದಾರೆ. ಸದ್ಯ ಲೊಲಿಟಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ