ಮಂಗಳೂರು: “ತುಳುನಾಡಿನ ಆಚರಣೆಗಳು ಮತ್ತು ಸಂಸ್ಕೃತಿ ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗಬಾರದು. ನಿತ್ಯವೂ ನಮ್ಮ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಂತಹ ಕಾರ್ಯಗಳು ನಮ್ಮಿಂದ ನಡೆಯಬೇಕು,” ಎಂದು ಮಂಗಳೂರಿನ ಪ್ರೆಸ್ಟೀಜ್ ಪದವಿ-ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅರುಣಾ ಕುಲಾಲ್ ಅವರು ಕರೆ ನೀಡಿದರು.

ನಗರದ ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ (IQAC), ಯುವ ರೆಡ್ ಕ್ರಾಸ್, ರೇಂಜರ್ಸ್ ಮತ್ತು ಸಾಂಸ್ಕೃತಿಕ ಸಂಘದ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ತುಳು ಸೌರಮಾನ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳಾದ ಆಷಾಢ (ಆಟಿ) ಮಾಸದ ಮಹತ್ವವನ್ನು ವಿವರಿಸಿದ ಅವರು, “ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಆಟಿ ತಿಂಗಳು ಭಾರಿ ಮಳೆ, ಕೃಷಿ ಚಟುವಟಿಕೆಗಳ ವಿರಾಮ ಮತ್ತು ಪ್ರಕೃತಿ ಆರಾಧನೆಗೆ ಹೆಸರುವಾಸಿಯಾಗಿದೆ. ಆಟಿ ಅಮಾವಾಸ್ಯೆ, ಪಾಲೆ ಕಷಾಯ ಸೇವನೆ, ಆಟಿ ಕಳೆಂಜ ನೃತ್ಯ ಮತ್ತು ಈ ಕಾಲದ ವಿಶೇಷ ಸಾಂಪ್ರದಾಯಿಕ ಖಾದ್ಯಗಳು ಪ್ರಕೃತಿಯೊಂದಿಗಿನ ನಮ್ಮ ಬದುಕನ್ನು ಬಿಂಬಿಸುತ್ತವೆ. ಸಮಾಜದ ಎಲ್ಲಾ ಅನಿಷ್ಟಗಳನ್ನು ಹೋಗಲಾಡಿಸುವ ಆಟಿ ಕಳಂಜ ಜಾನಪದ ಕುಣಿತದಂತಹ ಆಚರಣೆಗಳ ಹಿಂದಿನ ಆಶಯವನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೀತಾ ಎಂ.ಎಲ್. ಅವರು ಆಟಿ-ಕಳಂಜದ ಸಾಂಸ್ಕೃತಿಕ ಮತ್ತು ಆಚರಣಾತ್ಮಕ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಆಷಾಢ ಮಾಸದ ವಿಶೇಷ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆಟಿ ತಿಂಗಳ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿಶೇಷ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಉದ್ಯೋಗ ಕೋಶದ ಅಧಿಕಾರಿ ಶ್ರೀಮತಿ ಮಮತಾ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀ ಅಶ್ವಿನ್ ಮೆಂಡೋನ್ಸಾ ಹಾಗೂ ರೇಂಜರ್ ಲೀಡರ್ ಶ್ರೀಮತಿ ಪ್ರಮೀಳ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಸಂತೋಷ್ ಸ್ವಾಗತಿಸಿದರು. ಐಕ್ಯೂಎಸಿ ಸಹ ಸಂಯೋಜನಾಧಿಕಾರಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಸಾಂಸ್ಕೃತಿಕ ಸಂಘದ ಸಂಯೋಜಕರಾದ ಶ್ರೀ ಕೃಷ್ಣಮೂರ್ತಿ ವಂದಿಸಿದರು.
