canaratvnews

ಮಾಜಿ ಡಾನ್​​ ಮುತ್ತಪ್ಪ ರೈ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ ಘಟನೆ ನಿನ್ನೆ ರಾತ್ರಿ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ.

ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್​ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ ಸೀಟ್​ನಲ್ಲಿದ್ದ ರಿಕ್ಕಿ ರೈಗೆ ಮೂಗು, ಕೈಗೆ ಗುಂಡು ತಾಕಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2 ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ರಿಕ್ಕಿ ರಿಯಲ್ ಎಸ್ಟೇಟ್ ಬಿಸಿನೆಸ್​​​ನಲ್ಲಿ ಆಕ್ಟಿವ್ ಆಗಿದ್ದರು. ನಿನ್ನೆ ರಾಮನಗರ ತಾಲೂಕಿನ ಬಿಡದಿ ಮನೆಯಿಂದ ತಡರಾತ್ರಿ ತನ್ನ ಫಾರ್ಚ್ಯೂನರ್​ ಕಾರಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸುಮಾರು 11.30 ರ ಹೊತ್ತಿಗೆ ಮನೆಯಿಂದ ಹೊರಬರ್ತಿದ್ದಂತೆ ಗೇಟ್​​ ಬಳಿ ದುಷ್ಕರ್ಮಿ, ಎರಡು ಸುತ್ತಿನ ಫೈರಿಂಗ್​ ಮಾಡಿದ್ದಾನೆ. 70 ಎಂಎಂ ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ಮಾಡಲಾಗಿದೆ.

ಡ್ರೈವರ್‌ ಇದ್ದುದರಿಂದ ಬಚಾವ್‌

ರಿಕ್ಕಿ ರೈ ಪ್ರತಿ ಬಾರಿ ತಾವೇ ಕಾರು ಡ್ರೈವ್​ ಮಾಡುತ್ತಿದ್ದರು. ಹೀಗಾಗಿ ಡ್ರೈವರ್​​ ಸೀಟ್​ ಟಾರ್ಗೆಟ್​ ಮಾಡಿ ಅಟ್ಯಾಕ್​ ಮಾಡಲಾಗಿತ್ತು. ಆದರೆ ನಿನ್ನೆ ತಡರಾತ್ರಿ ತನ್ನ ಬದಲು ಡ್ರೈವರ್​ಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ, ಹಿಂಬದಿ ಸೀಟ್​ನಲ್ಲಿ ಗನ್​ ಮ್ಯಾನ್​ ಜತೆ ಕುಳಿತಿದ್ದರು.

ಹೀಗಾಗಿ ಫೈರಿಂಗ್​ ಆಗುತ್ತಿದ್ದಂತೆ ಕಾರು ಚಾಲಕ ಬಸವರಾಜು ಮುಂದೆ ಬಗ್ಗಿದ್ದು, ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.​

ಬಿಡದಿ ಮನೆಯಿಂದ KA 53 MC 7128 ನಂಬರ್​​​ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ರಿಕ್ಕಿ ರೈ ಜತೆಗೆ ಗನ್​ ಮ್ಯಾನ್ ಇದ್ದು, ಚಾಲಕ ಕಾರು ಚಲಾಯಿಸ್ತಿದ್ದ. ಹಿಂಬದಿ ಸೀಟ್​ನಲ್ಲಿ ರಿಕ್ಕಿ ರೈ ಕುಳಿತಿದ್ದರು. ಪೊಲೀಸರ ಮಾಹಿತಿ ಪ್ರಕಾರ 70mm ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ನಡೆಸಲಾಗಿದೆ.

ಒಂದು ಬಾರಿ ಮಾತ್ರ ಗುಂಡು ಹಾರಿಸಿದ್ದು, ಕಾರಿನ ಡೋರ್​ ಸೀಳಿ ಬಂದ ಬುಲೆಟ್, ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್​ನ ಎಡಭಾಗದ ಡೋರ್​ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

ರಿಕ್ಕಿ ರೈ ಹತ್ಯೆಗೆ ನಡೆದಿತ್ತಾ ಪೂರ್ವ ನಿಯೋಜಿತ ಸಂಚು?

ರಿಕ್ಕಿ ರೈ ಹತ್ಯೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟುಕೊಂಡಿವೆ. ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿರುವ ರಿಕ್ಕಿ ರೈ ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ.

ಈ ವೇಳೆ ಹಿಂಬಾಲಿಸಿ ಕಾದು ಕೃತ್ಯ ಎಸಗಲಾಗಿದೆ. ಮೇಲ್ನೋಟಕ್ಕೆ ಪ್ರೋಪೆಷನಲ್ ಶಾರ್ಪ್ ಶೂಟರ್​ನಿಂದಲೇ ಅಟ್ಯಾಕ್ ನಡೆದಿದ್ದು, ಅದೃಷ್ಟವಶಾತ್ ರಿಕ್ಕಿ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share News
Exit mobile version