ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ, ಕಲ್ಲಡ್ಕ ಶ್ರೀರಾಮ ಶಾಲೆಯ ಆರು ವರ್ಷದ ವಿದ್ಯಾರ್ಥಿನಿ ಚಿರಸ್ವಿ ಎಂಬಾಕೆ ಮೃತಪಟ್ಟಿದ್ದು, ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಬುಧವಾರ ಸಂಜೆ ಶಾಲಾ ಅವಧಿ ಮುಗಿದ ನಂತರ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ವಾಹನವು ಬರಿಮಾರು ಸಮೀಪದ ಶ್ರೀ ಕಾನಲ್ತಾಯ ದೈವಸ್ಥಾನದ ರಸ್ತೆಯಲ್ಲಿ ಚಲಿಸುತ್ತಿತ್ತು. ಈ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಶಾಲಾ ವಾಹನದ ಮೇಲೆಯೇ ಉರುಳಿ ಬಿದ್ದಿದೆ. ಮರದ ಭಾರಕ್ಕೆ ವಾಹನ ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ತಕ್ಷಣವೇ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಹನದಲ್ಲಿದ್ದ ಮಕ್ಕಳನ್ನು ಹೊರತೆಗೆಯಲಾಯಿತಾದರೂ, ತೀವ್ರವಾಗಿ ಗಾಯಗೊಂಡಿದ್ದ 6 ವರ್ಷದ ಬಾಲಕಿ ಚಿರ ಚಿಕಿತ್ಸೆ ಫಲಕಾರಿಯಾಗದೆ ದುರಂತವಾಗಿ ಕೊನೆಯುಸಿರೆಳೆದಿದ್ದಾಳೆ. ಗಾಯಗೊಂಡ ಉಳಿದ ನಾಲ್ಕು ಜನ ಮಕ್ಕಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಥಳಕ್ಕೆ ಬಂಟ್ವಾಳ ಪೊಲೀಸರು ಹಾಗೂ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಘಟನೆಯಿಂದಾಗಿ ಕಲ್ಲಡ್ಕ ಶ್ರೀರಾಮ ಶಾಲಾ ವಲಯ ಹಾಗೂ ಬರಿಮಾರು ಗ್ರಾಮದಲ್ಲಿ ತೀವ್ರ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ.