canaratvnews

ಒಳ್ಳೆಯ ಗಾಯಕರಾಗುವ ಮುನ್ನ ಒಳ್ಳೆಯ ಕೇಳುಗರಾಗಿ: ಸಂಗೀತ ನಿರ್ದೇಶಕ ಸಂಜಯ್ ಜಾನ್ ರೊಡ್ರಿಗಸ್ ಕಿವಿಮಾತು

ಮಂಗಳೂರು: “ಒಳ್ಳೆಯ ಗಾಯಕರಾಗುವ ಮುನ್ನ ಒಳ್ಳೆಯ ಕೇಳುಗರಾಗಿ. ನೀವು ಎಷ್ಟು ಆಲಿಸುತ್ತೀರೋ, ಅಷ್ಟು ಕಲಿಯುತ್ತೀರಿ. ಕೇವಲ ಹಾಡುವುದಷ್ಟೇ ಅಲ್ಲ; ನೋಡಿ, ಆಲಿಸಿ, ಅರ್ಥಮಾಡಿಕೊಳ್ಳಿ ಮತ್ತು ಅಧ್ಯಯನ ಮಾಡಿ. ಹಾಡನ್ನು ಕೇಳಿ, ಬರೆಯಿರಿ, ರಿಪ್ಲೇ ಮಾಡಿ, ಮತ್ತೆ ಬರೆಯಿರಿ. ಹಿರಿಯರಿಂದ ಮಾರ್ಗದರ್ಶನ ಪಡೆಯಿರಿ. ಎಲ್ಲಕ್ಕಿಂತ ಮಿಗಿಲಾಗಿ ವಿನಯಶೀಲರಾಗಿರಿ. ನಿರಂತರ ಅಭ್ಯಾಸ ನಿಮ್ಮನ್ನು ಎತ್ತರಕ್ಕೆ ಬೆಳೆಸಿದರೆ, ವಿನಯಶೀಲತೆಯು ನಿಮಗೆ ಹೆಚ್ಚಿನ ಅವಕಾಶಗಳನ್ನು ತಂದು ಕೊಡುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ ಸಂಜಯ್ ಜಾನ್ ರೊಡ್ರಿಗಸ್ ಕಿವಿಮಾತು ಹೇಳಿದರು.

ಕಲಾಂಗಣದಲ್ಲಿ ನಡೆದ ‘ಸುರ್ ಸೊಭಾಣ್’ – ಹಿಂದೂಸ್ತಾನಿ ಸಂಗೀತ ತರಬೇತಿಯ ಮೂರನೇ ವರ್ಷದ ತರಗತಿಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಹಿಂದಿನ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಇದೇ ವೇಳೆ ಮಕ್ಕಳ ಪೋಷಕರನ್ನು ಶ್ಲಾಘಿಸಿದ ಅವರು, ಭಾನುವಾರದ ಬಿಡುವಿಲ್ಲದ ದಿನಚರಿಯ ನಡುವೆಯೂ ಮಕ್ಕಳ ಗಾಯನ ಪ್ರತಿಭೆಯನ್ನು ಪೋಷಿಸಲು ಪೋಷಕರು ಪಡುತ್ತಿರುವ ಶ್ರಮ ಮೆಚ್ಚುವಂತಹುದು. ಮಕ್ಕಳಿಗೆ ಪ್ರೋತ್ಸಾಹ ನೀಡಿ, ಆದರೆ ಟಿವಿಯಲ್ಲಿ ಬರುತ್ತಾರೆ ಅಥವಾ ದೊಡ್ಡ ವೇದಿಕೆ ಸಿಕ್ಕಿದೆ ಎಂಬ ಕಾರಣಕ್ಕೆ ಸಣ್ಣಪುಟ್ಟ ಯಶಸ್ಸುಗಳಿಗೇ ಆರಂಭದಲ್ಲೇ ಅತಿಯಾಗಿ ಸಂಭ್ರಮಿಸಬೇಡಿ. ದೊಡ್ಡ ಕನಸುಗಳನ್ನು ಕಾಣಲು ಮತ್ತು ಪ್ರತಿಯೊಂದು ವೇದಿಕೆಗೂ ಸೂಕ್ತ ಗೌರವ ನೀಡಲು ಅವರಿಗೆ ಕಲಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಮಾತನಾಡಿ, ಇದೊಂದು ಅಕಾಡೆಮಿಕ್ ತರಬೇತಿಯಾಗಿರು ವುದರಿಂದ ಮಕ್ಕಳು ತರಗತಿಯ ಸಮಯದಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು ಹಾಗೂ ತಪ್ಪದೆ ತರಗತಿಗಳಿಗೆ ಹಾಜರಾಗಿ ಕಲಿಯಬೇಕು. ಈ ಶಾಸ್ತ್ರೀಯ ಸಂಗೀತದ ಅಭ್ಯಾಸವು ಕೊಂಕಣಿ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ತರಬೇತುಗಾರ್ತಿ ಶಿಲ್ಪಾ ಕುಟಿನ್ಹಾ, ಕಳೆದ ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ನೀಡಿ, ಹೊಸ ಶೈಕ್ಷಣಿಕ ವರ್ಷದ ಪರಿಚಯ ಮಾಡಿಕೊಟ್ಟರು. ವೇದಿಕೆಯಲ್ಲಿ ಸುಮೆಳ್ ಸದಸ್ಯ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು.

ಗೌರವಾರ್ಪಣೆ ಮತ್ತು ಅಭಿನಂದನೆ: ನೂರು ಶೇಕಡ ಹಾಜರಾತಿ ದಾಖಲಿಸಿದ ಲೆನೊರಾ ಮಸ್ಕರೇನ್ಹಸ್‌ ಇವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ವರ್ಷವಿಡೀ ತರಬೇತಿಗೆ ಸಹಕರಿಸುವ ಡಿಯಲ್ ಡಿಸೋಜಾ, ಆಶ್ವಿಲ್ ಕುಲಾಸೊ, ವಿಕ್ಟರ್ ಮತಾಯಸ್, ಸವಿತಾ ಸಲ್ಡಾನ್ಹಾ ಮತ್ತು ಸಂದೀಪ್ ಮಸ್ಕರೇನ್ಹಸ್ ಅವರನ್ನು ಗೌರವಿಸಲಾಯಿತು. ವಿಕಾಸ್ ಲಸ್ರಾದೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share News
Exit mobile version