ಮಂಗಳೂರು: ನಗರದ ಪ್ರತಾಪನಗರದ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ನಡೆಯುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ದಿನಾಂಕ ಸೆಪ್ಟೆಂಬರ್ 14 ರಿಂದ 18 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. 5 ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದೆ.ಎಂದು ಸಮಿತಿಯ ಕಾರ್ಯದರ್ಶಿ ಶ್ರೀ ಜಿ. ಸುರೇಶ್ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 14: ಭವ್ಯ ಉದ್ಘಾಟನೆ ಹಾಗೂ ಗಣಹೋಮ: ಉತ್ಸವದ ಉದ್ಘಾಟನಾ ಕಾರ್ಯಕ್ರಮವು ಸೆ. 14 ಬೆಳಗ್ಗೆ 10:00 ಗಂಟೆಗೆ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ದಕ್ಷಿಣ-ಮಧ್ಯ ಕ್ಷೇತ್ರ ಪ್ರಚಾರಕರಾದ ಶ್ರೀ ಭರತ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ತದನಂತರ ಗಣಹೋಮ ನೆರವೇರಲಿದೆ.
ಸಂಜೆ 6:45ಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಅರ್ಜುನ್ ಭಂಡಾರ್ಕರ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದ್ದು, ರಾತ್ರಿ 7:45 ರಿಂದ ಮೂಡಗಣಪತಿ ಸೇವೆ ಹಾಗೂ ರಂಗಪೂಜೆ ನೆರವೇರಲಿದೆ.
ಯುವ ಹಾಗೂ ಮಹಿಳಾ ಸಮಾವೇಶಗಳ ಆಕರ್ಷಣೆ:
ಸೆ. 15 ಮಂಗಳವಾರ : ಪೂರ್ವಾಹ್ನ 10:00 ಗಂಟೆಗೆ “ಯುವ ಸಮಾವೇಶ” ನಡೆಯಲಿದೆ. ಸಂಜೆ 6:00 ಗಂಟೆಗೆ ಶ್ರೀ ಪಾಂಚಜನ್ಯ ಪ್ರತಿಷ್ಠಾನದವರಿಂದ “ಸಪ್ತಕ್ಷೇತ್ರ ಮಹಾತ್ಮೆ” ನೃತ್ಯರೂಪಕ ಪ್ರದರ್ಶನಗೊಳ್ಳಲಿದ್ದು, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ. ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸೆ. 17 ಗುರುವಾರ : ಮಧ್ಯಾಹ್ನ 2:30 ರಿಂದ “ಮಹಿಳಾ ಸಮಾವೇಶ” ನಡೆಯಲಿದ್ದು, ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ:
ಸೆ. 16 ರ ಬುಧವಾರ ಮುಂಜಾನೆ 5:00ಕ್ಕೆ ಉಷಃಕಾಲ ಪೂಜೆ ನೆರವೇರಲಿದ್ದು, ಮಧ್ಯಾಹ್ನ 1:30ಕ್ಕೆ ಭಕ್ತಾದಿಗಳಿಗೆ ಭವ್ಯ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ. ಸಂಜೆ 6:00 ಗಂಟೆಗೆ ವಿದುಷಿ ವೈಷ್ಣವಿ ಪ್ರಭು ಮತ್ತು ಗಂಜಿಮಠದ ನಟನಂ ನೃತ್ಯ ವಿದ್ಯಾಲಯದ ಶಿಷ್ಯರಿಂದ “ಶ್ರೀ ಗಣೇಶಾಮೃತ” ಭರತನಾಟ್ಯ ನಡೆಯಲಿದ್ದು, ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಂಜುನಾಥ್ ಬಿ. ಸಿಂಗೈ ಮುಖ್ಯ ಅತಿಥಿಗಳಾಗಿರಲಿದ್ದಾರೆ.
ಡಾ. ವಿಜಯಕುಮಾರ್ ಪಾಟೀಲ್ ಅವರಿಂದ ‘ಭಜನ್ ಸಂಧ್ಯಾ’:
ಸೆ. 17ರ ಗುರುವಾರ ಸಂಜೆ 6:00 ಗಂಟೆಗೆ ಧಾರವಾಡದ ಪ್ರಸಿದ್ಧ ಗಾಯಕ ಡಾ| ವಿಜಯಕುಮಾರ್ ಪಾಟೀಲ್ ಅವರಿಂದ “ಭಜನ್ ಸಂಧ್ಯಾ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ನಿಧಿ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕೆ. ಸನಿಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸೆ. 18: ಭವ್ಯ ಶೋಭಾಯಾತ್ರೆ ಮತ್ತು ವಿಸರ್ಜನೆ:
ಉತ್ಸವದ ಸಮಾರೋಪ ದಿನವಾದ ಶುಕ್ರವಾರ ಮಧ್ಯಾಹ್ನ 1:15ಕ್ಕೆ ವಿಸರ್ಜನಾ ಪೂಜೆ ಹಾಗೂ ಸಂಜೆ 5:30ಕ್ಕೆ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಸಂಜೆ 6:15ಕ್ಕೆ ಶ್ರೀ ಬಾಬುಸ್ವಾಮಿ ಸೇವಾ ಸಮಿತಿಯ ಪ್ರಧಾನ ಅರ್ಚಕರಾದ ಶ್ರೀ ಎಸ್. ಸುಂದರ್ ಅವರ ಚಾಲನೆಯೊಂದಿಗೆ ಶ್ರೀ ಮಹಾಗಣಪತಿಯ ಭವ್ಯ ಶೋಭಾಯಾತ್ರೆಯು ಸಂಘನಿಕೇತನದಿಂದ ಹೊರಡಲಿದೆ.
ಮೆರವಣಿಗೆಯ ಮಾರ್ಗ: ಸಂಘನಿಕೇತನದಿಂದ ಹೊರಟು ಮಣ್ಣಗುಡ್ಡೆ, ನ್ಯೂ ಚಿತ್ರಾ ಜಂಕ್ಷನ್, ರಥಬೀದಿಯಾಗಿ ಸಾಗಿ ಶ್ರೀ ಮಹಾಮಾಯಾ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನಗೊಳ್ಳುವುದರೊಂದಿಗೆ 79ನೇ ವರ್ಷದ ಮಹೋತ್ಸವವು ಸಂಪನ್ನಗೊಳ್ಳಲಿದೆ.
