canaratvnews

ವಿಟ್ಲ ರಸ್ತೆ ಕಾಮಗಾರಿ- ಸಂಚಾರ ಮಾರ್ಗ ಬದಲಾವಣೆ

ವಿಟ್ಲ ,ಜೂನ್ 08 : ಪುತ್ತೂರು ವಿಧಾನಸಭಾ ಕ್ಷೇತ್ರದ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಜೂನ್ 5 ರಿಂದ ಮುಂದಿನ 3 ತಿಂಗಳವರೆಗೆ ಅನ್ವಯವಾಗುವಂತೆ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಮತ್ತು ಚಾಲಕರು ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಲಾಗಿದೆ:

ವಿಟ್ಲದಿಂದ ಕಲ್ಲಡ್ಕ ಕಡೆಗೆ ಹೋಗುವ ವಾಹನಗಳು: ಸಾರಡ್ಕ ಹಾಗೂ ವಿಟ್ಲ ಕಡೆಯಿಂದ ಮಂಗಳಪದವು, ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಮತ್ತು ಬಸ್ಸುಗಳು ವಿಟ್ಲ ನಾಲ್ಕು ಮಾರ್ಗದ ಬಳಿಯ ಬದ್ರಿಯಾ ಟೆಕ್ಸ್‌ಟೈಲ್ಸ್ ರಸ್ತೆಯಿಂದ ತಿರುವು ಪಡೆದು ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ ಹಾಗೂ ಸುರಕ್ಷಾ ಆಸ್ಪತ್ರೆ ಮಾರ್ಗವಾಗಿ ಬೊಬ್ಬೆಕೇರಿಗೆ ತಲುಪಬೇಕು.
ಕಲ್ಲಡ್ಕದಿಂದ ವಿಟ್ಲಕ್ಕೆ ಬರುವ ವಾಹನಗಳು: ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಬರುವ ಎಲ್ಲಾ ವಾಹನಗಳು ಸದ್ಯ ಇರುವ ಹಳೆಯ ರಸ್ತೆಯಲ್ಲೇ ಏಕಮುಖವಾಗಿ (One-way) ಸಂಚರಿಸಲು ಅವಕಾಶ ನೀಡಲಾಗಿದೆ.

ಭಾರಿ ಘನವಾಹನಗಳಿಗೆ ನಿಷೇಧ: 10 ಚಕ್ರಗಳಿಗಿಂತ ಹೆಚ್ಚಿನ ಭಾರದ ಘನವಾಹನಗಳು ನಾಲ್ಕು ಮಾರ್ಗ ಜಂಕ್ಷನ್‌ನಿಂದ ದೇವಸ್ಥಾನದ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವಾಹನಗಳು ಕಬಕ ರಸ್ತೆಯ ಮೂಲಕವೇ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Share News
Exit mobile version