LATEST NEWS

ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ ಪ್ರಗತಿಪರ ಕೃಷಿಕ ಮಹಿಳೆ ರೀಟಾ ಮರಿಯಾ ಮಿನೆಜಸ್ ಅವರಿಗೆ ‘ಆಸರೆ ಕೃಷಿರತ್ನ 2027’ ಗೌರವ

ಮಂಗಳೂರು: “ಮಹಿಳೆ ಅಬಲೆಯಲ್ಲ, ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಕೃಷಿ ರಂಗದಲ್ಲೂ ಮಹತ್ತರ ಸಾಧನೆ ಮಾಡಬಹುದು” ಎಂಬುದನ್ನು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೆಲು ನಿವಾಸಿ ಶ್ರೀಮತಿ ರೀಟಾ ಮರಿಯಾ ಮಿನೆಜಸ್ ಸಾಧಿಸಿ ತೋರಿಸಿದ್ದಾರೆ. ಕೃಷಿ, ಹೈನುಗಾರಿಕೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆ ಒತ್ತಿರುವ ಇವರ ಸಾಧನೆಯನ್ನು ಗುರುತಿಸಿ ಮಂಗಳೂರಿನ ಬಲ್ಮಟದ ಪ್ರತಿಷ್ಠಿತ ‘ಆಸರೆ ಗೆಳೆಯರ ಬಳಗ’ ಸಂಸ್ಥೆಯು ತನ್ನ ದಶಮಾನೋತ್ಸವದ ಸಂಭ್ರಮದಲ್ಲಿ ‘ಆಸರೆ ಕೃಷಿರತ್ನ 2027’ ಪ್ರಶಸ್ತಿ ಘೋಷಿಸಿದೆ.

ಜನವರಿ 26 ರಂದು ಮಂಗಳೂರಿನ ಮಲ್ಲಿಕಟ್ಟೆಯ ಜುಗುಲ್ ಹಾಲ್‌ನಲ್ಲಿ ನಡೆಯಲಿರುವ ‘ಆಸರೆ ದಶಮಾನೋತ್ಸವ 2027’ ಸಮಾರಂಭದಲ್ಲಿ ಇವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಲಾಗುವುದು ಎಂದು ಸಂಸ್ಥೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹುಟ್ಟಿನಿಂದಲೇ ಬೆಳೆದುಬಂದ ಕೃಷಿ ಪ್ರೀತಿ

ಬ್ರಹ್ಮಾವರದ ಅರೂರಿನ ದಿವಂಗತ ಸಾಲ್ವದೋರ್ ಡಿಸೋಜ ಹಾಗೂ ಶ್ರೀಮತಿ ಪ್ರೆಸಿಲ್ಲಾ ದಂಪತಿಗಳ ಸುಪುತ್ರಿಯಾಗಿರುವ ರೀಟಾ ಮರಿಯಾ ಅವರು ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯುಳ್ಳವರು. ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೂ ಹೆತ್ತವರ ಜೊತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಇವರು, 2004 ರಲ್ಲಿ ವಿದೇಶದಲ್ಲಿ ಉದ್ಯೋಗಿಯಾಗಿರುವ ಶ್ರೀ ಜೋಕಿಂ ಮಿನೆಜಸ್ ಅವರನ್ನು ವಿವಾಹವಾದರು. ಮದುವೆಯ ನಂತರ ಗಂಡನ ಮನೆಯಲ್ಲೂ ತಮ್ಮ ಕೃಷಿ ಪ್ರೀತಿಯನ್ನು ಮುಂದುವರಿಸಿದ ಇವರಿಗೆ ಜೀವನ್ ರೊಯ್ ಮಿನೆಜಸ್ ಹಾಗೂ ಜೀನ್ ರೋಯ್ಸ್ ಮಿನೆಜಸ್ ಎಂಬ ಇಬ್ಬರು ಪುತ್ರರಿದ್ದಾರೆ.

ಒಂದೇ ಹಸುವಿನಿಂದ 16 ದನಗಳ ಕೊಟ್ಟಿಗೆ!

ಕೊರೋನ ಲಾಕ್‌ಡೌನ್ ಅವಧಿಯಲ್ಲಿ ತಾಯಿ ಮನೆಯಿಂದ ಉಡುಗೊರೆಯಾಗಿ ಬಂದ ಒಂದೇ ಒಂದು ಹಸುವಿನಿಂದ ಇವರ ಹೈನುಗಾರಿಕೆಯ ಪಯಣ ಆರಂಭವಾಯಿತು. ಇಂದು ಇವರ ಕೊಟ್ಟಿಗೆಯಲ್ಲಿ ಸುಮಾರು 16 ದನಗಳು ಹಾಗೂ ಕರುಗಳಿವೆ. ದಿನಕ್ಕೆ ಬರೋಬ್ಬರಿ 100 ಲೀಟರ್ ಹಾಲು ಉತ್ಪಾದಿಸಿ, ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ (ಡೈರಿ) ಅತೀ ಹೆಚ್ಚು ಹಾಲು ನೀಡುವ ಗ್ರಾಹಕರಾಗಿ 2026-27ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಇವರದ್ದಾಗಿದೆ.

ದನಗಳಿಗೆ ತಾವೇ ಸ್ವತಃ ಜೀಪ್ ಚಲಾಯಿಸಿಕೊಂಡು ಹೋಗಿ ದೂರದ ಊರುಗಳಿಂದ ಮೇವು ತರುವುದು, ತೋಟದ ಕಳೆಗಳನ್ನು ಸ್ವತಃ ಮೆಷಿನ್ ಮೂಲಕ ಸ್ವಚ್ಛಗೊಳಿಸುವುದು ಇವರ ದಿನಚರಿ. ಹಸುಗಳಿಗೆ ಪೌಷ್ಟಿಕಾಂಶ ನೀಡಲು ಮನೆಯಲ್ಲೇ ಜೋಳವನ್ನು ಮೊಳಕೆ ಬರಿಸುವ ವೈಜ್ಞಾನಿಕ ಪದ್ಧತಿ ಅಳವಡಿಸಿ ಕೊಂಡಿದ್ದಾರೆ. ವಿಶೇಷವೆಂದರೆ, ಹೈನುಗಾರಿಕೆಯ ಸ್ವಾವಲಂಬಿ ಆದಾಯದಿಂದಲೇ ಹಾಲಿನ ಹಣದಿಂದ ಇವರು ಸ್ವಂತ ಹೊಸ ಜಿಮ್ನಿ ವಾಹನವನ್ನು ಖರೀದಿಸಿ ಸಾಧನೆ ಮೆರೆದಿದ್ದಾರೆ.

ಸಾವಯವ ಕೃಷಿಗೆ ಆದ್ಯತೆ
ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡಿರುವ ರೀಟಾ ಅವರು, ಕೊಟ್ಟಿಗೆಯನ್ನು ತೊಳೆದ ನೀರನ್ನು ಅಡಿಕೆ ಗಿಡಗಳಿಗೆ ಸಿಂಪಡಿಸುವ ಹಾಗೂ ಸಗಣಿ ಗೊಬ್ಬರವನ್ನು ಬಳಸುವ ಮೂಲಕ ಯಾವುದೇ ರಾಸಾಯನಿಕ ಬಳಸದೆ ಮಾದರಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಅಡಿಕೆ ತೋಟದ ನಡುವೆ ವೀಳ್ಯದೆಲೆ, ತರಕಾರಿ ಮುಂತಾದ ಉಪಬೆಳೆಗಳನ್ನು ಬೆಳೆದು ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ
.

ಸಮಾಜಮುಖಿ ಕಾರ್ಯಗಳು:
ಕೃಷಿಯಷ್ಟೇ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಇವರು ಸಕ್ರಿಯರಾಗಿದ್ದಾರೆ. ಸೈoಟ್ ಪ್ಯಾಟ್ರಿಕ್ ಚರ್ಚ್‌ನ ಮಹಿಳಾ ಸಂಘಟನೆ, ಕಥೋಲಿಕ್ ಸಭಾದ ಅಧ್ಯಕ್ಷರಾಗಿ 2 ವರ್ಷ, ಪವಿತ್ರ ಹೃದಯದ ವಾಳೆಯ ಗುರ್ಕಾರ್ ಆಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಚರ್ಚ್ ಪಾಲನಾ ಸಮಿತಿ ಹಾಗೂ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಮಿತಿಯಲ್ಲೂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಸ್ಥಳೀಯ ಸ್ವಸಹಾಯ ಸಂಘಗಳ ಮೂಲಕ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಅಪ್ರತಿಮ ಪರಿಶ್ರಮ ಹಾಗೂ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಇತ್ತೀಚೆಗೆ ನವೆಂಬರ್ 1 ರಂದು ಇವರಿಗೆ ಪ್ರತಿಷ್ಠಿತ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ನೀಡಿ ಗೌರವಿಸಿದೆ. ಇದೀಗ ಒಲಿದುಬಂದಿರುವ ‘ಆಸರೆ ಕೃಷಿರತ್ನ’ ಪ್ರಶಸ್ತಿಯು ಇವರ ಕೃಷಿ ಕಾಯಕಕ್ಕೆ ಸಂದ ಗೌರವವಾಗಿದೆ.

Share News