ಮಂಗಳೂರು : ಮಂಗಳೂರಿನ ಐತಿಹಾಸಿಕ ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕ ಗೊಂಡಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರಿಂದ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಜೂನ್ 1ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರ ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ, ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷರಾದ ಸಂತೋಷ್ ಡಿಸೋಜ ಬಜ್ಪೆ ಅವರ ನೇತೃತ್ವದ ಪದಾಧಿಕಾರಿಗಳ ತಂಡವು ನೂತನ ನಿರ್ದೇಶಕರನ್ನು ಭೇಟಿ ಮಾಡಿತು. ಅವರಿಗೆ ಹೂಗುಚ್ಛ ನೀಡಿ, ಆತ್ಮೀಯವಾಗಿ ಅಭಿನಂದಿಸಿ, ಮುಂದಿನ ಅವರ ಸಮಾಜಮುಖಿ ಕಾರ್ಯಗಳಿಗೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಎರಡನೇ ಉಪಾಧ್ಯಕ್ಷ ಆಲ್ಬರ್ಟ್ ಸುನೀಲ್ ಮೊನಿಸ್ ಬೆಳ್ತಂಗಡಿ, ಖಜಾಂಚಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್, ಸಹ ಕಾರ್ಯದರ್ಶಿ ಸ್ಪ್ಯಾನಿ ಮಿರಾಂದ ನೀರುಡೆ ಹಾಗೂ ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಉಪಸ್ಥಿತರಿದ್ದು,

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಟ್ಟೆ ಅವರು, “ಕಳೆದ 47 ವರ್ಷಗಳಿಂದ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಕಥೊಲಿಕ್ ಸಭಾ ಸಂಘಟನೆಗೆ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರಂತಹ ಅನುಭವೀ, ಸರಳ ಹಾಗೂ ಸೇವಾ ಮನೋಭಾವದ ಧರ್ಮಗುರುಗಳ ನಾಯಕತ್ವ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ. ಅವರ ಮಾರ್ಗದರ್ಶನದಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಕಥೊಲಿಕ್ ಸಭಾದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಆಧ್ಯಾತ್ಮಿಕ ಮಾರ್ಗದರ್ಶನ, ಪ್ರೇರಣೆ ಹಾಗೂ ಧೈರ್ಯ ತುಂಬಲಿದ್ದಾರೆ. ಸಂಘಟನೆಯು ತನ್ನ ನಾಗರಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಜವಾಬ್ದಾರಿಗಳನ್ನು ಸ್ಪಷ್ಟತೆ ಮತ್ತು ದೃಢತೆಯೊಂದಿಗೆ ನಿರ್ವಹಿಸಲು ಅವರು ಸಹಕಾರಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
‘ಸೇವೆ, ತ್ಯಾಗ ಮತ್ತು ಐಕ್ಯತೆ’ ಎಂಬ ಧೈಯ ವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಕಥೊಲಿಕ್ ಸಭಾ, ಮಂಗಳೂರು ಧರ್ಮಕ್ಷೇತ್ರದ ಅಧಿಕೃತ ಮಾನ್ಯತೆ ಪಡೆದ ಸಂಘಟನೆಯಾಗಿದ್ದು, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ರಾಜಕೀಯ ಜಾಗೃತಿ ಹಾಗೂ ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

