canaratvnews

ಮರಣ ಹೊಂದಿದವರ ‘ಗೃಹಲಕ್ಷ್ಮಿ’ ಹಣ ಸರ್ಕಾರಕ್ಕೆ ವಾಪಸ್ ಮಾಡಿ: ಭರತ್ ಮುಂಡೋಡಿ ಸೂಚನೆ

ಮಂಗಳೂರು, ಜೂನ್.16: ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿ, ಆ ಬಳಿಕ ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾಗಿರುವ ಹಣವನ್ನು ತಕ್ಷಣವೇ ಸರ್ಕಾರಕ್ಕೆ ಮರಳಿ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಅವರು ಸೂಚಿಸಿದ್ದಾರೆ.

ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

3.34ಕೋಟಿ ರೂಪಾಯಿ ಪತ್ತೆ:

ರಾಜ್ಯ ಸರ್ಕಾರದ ದೊಡ್ಡ ಯೋಜನೆಯಾದ ಗೃಹಲಕ್ಷ್ಮಿಯಡಿ, ಜಿಲ್ಲೆಯಲ್ಲಿ ಮರಣ ಹೊಂದಿದ 3477 ಫಲಾನುಭವಿಗಳ ಖಾತೆಗೆ ಒಟ್ಟು 3.34 ಕೋಟಿ ರೂಪಾಯಿ ಜಮೆಯಾಗಿದೆ ಎಂದು ಬೆಂಗಳೂರಿನ ಕೇಂದ್ರ ಕಚೇರಿಯಿಂದ ಮಾಹಿತಿ ಬಂದಿದೆ. ಇಂತಹ ಖಾತೆಗಳಿಗೆ ಹಣ ಹೋಗುವುದನ್ನು ತಡೆದರೆ ಸರ್ಕಾರದ ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದರು.

ಅಧಿಕಾರಿಗಳಿಗೆ ಗಡುಸು ಸೂಚನೆ:

ಮೃತಪಟ್ಟ ಫಲಾನುಭವಿಗಳ ಹೆಸರನ್ನು ಗೃಹಲಕ್ಷ್ಮಿ ಯೋಜನೆಯ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಲು ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕು ಗ್ಯಾರಂಟಿ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲನೆ ನಡೆಸಬೇಕು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
Share News
Exit mobile version