canaratvnews

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂರು ಸ್ಥಾನಗಳ ಪೈಕಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ಮೀಸಲು ಸಂಭವ; ನವೀನ್ ಡಿಸೋಜ ಹೆಸರು ಮುಂಚೂಣಿಗೆ

ಬೆಂಗಳೂರು: ಕರ್ನಾಟಕದಿಂದ ತೆರವಾಗಲಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಈ ಪೈಕಿ ಒಂದು ಸ್ಥಾನವನ್ನು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಧಾನಸಭೆಯಲ್ಲಿನ ಪ್ರಸ್ತುತ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವು ಮೂರೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗುವುದು ಗ್ಯಾರಂಟಿಯಾಗಿದೆ. ಉಳಿದ ಎರಡು ಸ್ಥಾನಗಳ ಪೈಕಿ ಒಂದನ್ನು ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದ್ದರಿಂದ, ಈ ಬಾರಿ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

ನವೀನ್ ಡಿಸೋಜ ಹೆಸರು ಮುಂಚೂಣಿಯಲ್ಲಿ:
ಕರ್ನಾಟಕದಲ್ಲೇ ಅತಿ ಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಅದೃಷ್ಟ ಒಲಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಹಿರಿಯ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್‌ನ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ನವೀನ್ ಡಿಸೋಜಾ ಅವರ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚೆಗೆ ನಡೆದ ಕೇರಳ ಚುನಾವಣೆಯಲ್ಲಿ ನವೀನ್ ಡಿಸೋಜಾ ಅವರು ಪ್ರಚಾರ ಬಯಸದೆ ನಿಭಾಯಿಸಿದ ಕಾರ್ಯವೈಖರಿ ಪಕ್ಷದ ಹೈಕಮಾಂಡ್ ಗಮನ ಸೆಳೆದಿದೆ. ಈ ಎಲ್ಲಾ ಪ್ಲಸ್ ಪಾಯಿಂಟ್‌ಗಳ ಆಧಾರದ ಮೇಲೆ ಅವರನ್ನು ರಾಜ್ಯಸಭೆಗೆ ಕಳುಹಿಸಲು ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇನ್ನುಳಿದ ಮೂರನೇ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಜೂನ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂನ್ 18 ರಂದು ಮತದಾನ ನಡೆಯಲಿದೆ. ಅಭ್ಯರ್ಥಿಗಳ ಅಧಿಕೃತ ಪಟ್ಟಿ ಶೀಘ್ರದಲ್ಲೇ ಹೈಕಮಾಂಡ್‌ನಿಂದ ಪ್ರಕಟವಾಗುವ ನಿರೀಕ್ಷೆಯಿದೆ.

Share News
Exit mobile version