ಮಂಗಳೂರು:ರಾಜೀವ್ ಗಾಂಧಿಯವರು ನವ ಭಾರತದ ದಿಕ್ಸೂಚಿಯಾಗಿದ್ದರು. ವಿಜ್ಞಾನ, ತಂತ್ರಜ್ಞಾನ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ 35ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಳಿಕ ಅವರು ಮಾತನಾಡುತ್ತಿದ್ದರು.
21ನೇ ಶತಮಾನಕ್ಕಾಗಿ ಭಾರತವನ್ನು ಕಟ್ಟುವ ಕನಸನ್ನು, ದೂರದೃಷ್ಟಿಯ ವೈಜ್ಞಾನಿಕ, ವೈಚಾರಿಕ ಚಿಂತನೆಯ ಯೋಜನೆಗಳಿಂದ ನನಸಾಗಿಸಿದ್ದು ರಾಜೀವ್ ಗಾಂಧಿ. ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ದೇಶ ಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿಯ ಯಾವೊಬ್ಬ ನಾಯಕನೂ ದೇಶಕ್ಕಾಗಿ ಪ್ರಾಣ ಕೊಟ್ಟ ಇತಿಹಾಸವಿಲ್ಲ. ತ್ಯಾಗ ಮತ್ತು ಬಲಿದಾನದ ಇತಿಹಾಸ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದ ಅವರು, ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಯಸಿದ್ದರು. ರಾಹುಲ್ ಗಾಂಧಿಯವರು ಅದನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ರಾಜೀವ್ ಗಾಂಧಿಯವರು ತಂತ್ರಜ್ಞಾನ ಕ್ರಾಂತಿ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿ, ಮತದಾನದ ವಯಸ್ಸಿನ ಇಳಿಕೆ, ಹೊಸ ಶಿಕ್ಷಣ ನೀತಿ, ಸಾಮೂಹಿಕ ಲಸಿಕಾ ಅಭಿಯಾನದಂತಹ ಅನೇಕ ಜನಪರ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ದೂರದೃಷ್ಟಿಯ ಮುತ್ಸದ್ದಿ ಆಡಳಿತಗಾರ. ಅವರ ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲ ದೂರದೃಷ್ಟಿ ಮತ್ತು ಉತ್ತಮ ಆಡಳಿತದಿಂದ ರಾಷ್ಟ್ರದ ಗೌರವ ಹೆಚ್ಚಿದೆ ಎಂದು ತಿಳಿಸಿದರು.
ಈ ಸಂದರ್ಭ ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ನಿಗಮ ಮಂಡಳಿ ಅಧ್ಯಕ್ಷರಾದ ಶಾಲೆಟ್ ಪಿಂಟೋ, ಮಮತಾ ಗಟ್ಟಿ ಮಾತನಾಡಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್, ಬ್ಲಾಕ್ ಅಧ್ಯಕ್ಷ ಅಬ್ದುಲ್ ಜೆ.ಸಲೀಂ, ಮುಂಚೂಣಿ ಘಟಕಾಧ್ಯಕ್ಷರಾದ ಜೋಕಿಂ ಡಿಸೋಜಾ, ಅಬ್ಬಾಸ್ ಅಲಿ, ಪ್ರೇಮ್ ನಾಥ್ ಪಿ.ಬಿ, ಡೆನ್ನಿಸ್ ಡಿಸಿಲ್ವ, ಮುಖಂಡರಾದ ಕೆ.ಪಿ.ಥೋಮಸ್, ಹಯಾತುಲ್ಲಾ ಖಾಮಿಲ್, ಸಂಶುದ್ದೀನ್ ಬಂದರ್, ಸಬೀರ್ ಎಸ್, ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ಟಿ.ಡಿ.ವಿಕಾಸ್ ಶೆಟ್ಟಿ, ನಝೀರ್ ಬಜಾಲ್, ಇ.ಕೆ.ಹುಸೈನ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.