ಉಳ್ಳಾಲ: ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದರೆ, ಪ್ರತ್ಯೇಕ ಸ್ಥಳಗಳಲ್ಲಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ಒಟ್ಟು ಆರು ಮಂದಿ ಪೈಕಿ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಉಳಿದವರ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ.

ದೇರಳಕಟ್ಟೆ ಕಾನಕೆರೆಯಲ್ಲಿ ಮನೆಗೆ ಗುಡ್ಡ ಕುಸಿದು ಫಾತಿಮಾ ನಯೀಮ ಎಂಬ 11 ವರ್ಷದ ಬಾಲಕಿ ಮೃತಪಟ್ಟಿದ್ದರೆ, ಮೋಂಟೆಪದವು ಬಳಿ ಗುಡ್ಡ ಕುಸಿದು ಸಿಲುಕಿದ್ದವರಲ್ಲಿ ಪ್ರೇಮಾ ಪೂಜಾರಿ (52) ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳ, ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಿಸಿ ಗಂಭೀರ ಸ್ಥಿತಿಯಲ್ಲಿದ್ದ ಮಗು ದೇರಳಕಟ್ಟೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಮೋಂಟೆಪದವು ಬಳಿ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ :
ಮೋಂಟೆಪದವು ಬಳಿ ಗುಡ್ಡ ಕುಸಿದು ಐವರು ಸಿಲುಕಿದವರಲ್ಲಿ ಪ್ರೇಮಾ ಪೂಜಾರಿ ಎಂಬವರು ಮೃತಪಟ್ಟಿದ್ದಾರೆ. ಮೂವರು ಗುಡ್ಡದಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿದೆ.