ಮಂಗಳೂರು, ಜೂನ್.13: ರಷ್ಯಾ-ಉಕ್ರೇನ್ ಸಂಘರ್ಷ, ಅಮೆರಿಕ-ಇರಾನ್ ಉದ್ವಿಗ್ನತೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದಂತಹ ಸವಾಲುಗಳ ನಡುವೆಯೂ ಭಾರತವು ಶೇಕಡಾ 7.7 ರಷ್ಟು ಜಿಡಿಪಿ ಬೆಳವಣಿಗೆಯ ದರವನ್ನು ಸಾಧಿಸುವ ಮೂಲಕ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸಂಸದರಾದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ದೀರ್ಘ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆರ್ಥಿಕತೆಯ ಅಭೂತಪೂರ್ವ ಪ್ರಗತಿ: 2013-14ರಲ್ಲಿ ಭಾರತವು ವಿಶ್ವದ ಐದು ದುರ್ಬಲ (Fragile Five) ದೇಶಗಳ ಪಟ್ಟಿಯಲ್ಲಿತ್ತು. ಆಗ ಕೇವಲ 1.9 ಟ್ರಿಲಿಯನ್ ಡಾಲರ್ ಇದ್ದ ಭಾರತದ ಆರ್ಥಿಕತೆಯು, ಇಂದು 4.1 ಟ್ರಿಲಿಯನ್ ಡಾಲರ್‌ಗೆ ಬೆಳೆದಿದೆ. ಇದೇ ವೇಗದ ಬೆಳವಣಿಗೆ ಮುಂದುವ ರಿದರೆ, 2031ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಜಾಗತಿಕವಾಗಿ ಅಮೆರಿಕ (2.6%), ಚೀನಾ (4.4%), ಜರ್ಮನಿ (6.79%) ಮತ್ತು ಜಪಾನ್ (0.7%) ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆಯ ದರ ಅತ್ಯುನ್ನತವಾಗಿದೆ” ಎಂದು ಅವರು ಅಂಕಿ-ಅಂಶಗಳನ್ನು ಹಂಚಿಕೊಂಡರು.
*ಬಡತನ ನಿರ್ಮೂಲನೆ ಮತ್ತು ಉದ್ಯೋಗ: ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರದ ಜನಪರ ನೀತಿಗಳಿಂದಾಗಿ ದೇಶದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಪ್ರಸ್ತುತ ದೇಶದಲ್ಲಿ ನಿರುದ್ಯೋಗ ದರವು ಕೇವಲ 5.1% ಹಾಗೂ ಹಣದುಬ್ಬರ ದರವು 4.5% ನಷ್ಟಿದೆ. ಇದೇ ಅವಧಿಯಲ್ಲಿ ದೇಶದ ತಲಾ ಆದಾಯವು ಭಾರಿ ಏರಿಕೆ ಕಂಡಿದ್ದು, ರೂ. 49,000 ದಿಂದ ರೂ. 2.35 ಲಕ್ಷಕ್ಕೆ ತಲುಪಿದೆ ಎಂದು ಅವರು ವಿವರಿಸಿದರು.
* ಜನಕಲ್ಯಾಣ ಯೋಜನೆಗಳ ಯಶಸ್ಸು: ಮೋದಿ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳ ಸಾಧನೆಯನ್ನು ಡಾ. ಅಗರ್ವಾಲ್ ಅವರು ಈ ಕೆಳಗಿನಂತೆ ಪಟ್ಟಿ ಮಾಡಿದರು:
*ವಸತಿ ಮತ್ತು ಸ್ವಚ್ಛತೆ: ಬಡವರಿಗಾಗಿ 4 ಕೋಟಿ ಮನೆಗಳ ನಿರ್ಮಾಣ ಮತ್ತು 12 ಕೋಟಿ ಶೌಚಾಲಯಗಳ ನಿರ್ಮಾಣ.
*ಆಹಾರ ಮತ್ತು ವಿದ್ಯುತ್: 80 ಕೋಟಿ ಜನರಿಗೆ ಉಚಿತ ರೇಷನ್ ಹಾಗೂ ದೇಶದ ಎಲ್ಲಾ ಹಳ್ಳಿ ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ.
*ಆರೋಗ್ಯ ಸುರಕ್ಷತೆ: ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿ ಜನರಿಗೆ ರೂ. 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ.
*ಇಂಧನ ನೆರವು: 10.50 ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ಮತ್ತು ಸಿಲಿಂಡರ್‌ಗೆ ರೂ. 302 ಸಬ್ಸಿಡಿ.
*ಶಿಕ್ಷಣ: ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ’ಯಡಿ ರೂ. 10 ಲಕ್ಷದವರೆಗೆ ಸ್ವಯಂ ಖಾತರಿ ಸಾಲದ ಸೌಲಭ್ಯ.
*ತೆರಿಗೆ ವಿನಾಯಿತಿ ಮತ್ತು ರೈತರಿಗೆ ನೆರವು:ಮಧ್ಯಮ ವರ್ಗದ ಜನರಿಗೆ ದೊಡ್ಡ ರಿಲೀಫ್ ನೀಡಲಾಗಿದ್ದು, ಪ್ರಸ್ತುತ ರೂ. 12.75 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇನ್ನು ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಯಡಿ ಈಗಾಗಲೇ 9 ಕೋಟಿಗೂ ಹೆಚ್ಚು ರೈತರಿಗೆ ವಾರ್ಷಿಕ ರೂ. 6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.