LATEST NEWS

ಅಕಸ್ಮಿಕ ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕನಿಗೆ 1 ಲಕ್ಷ ರೂ. ಸಿಎಂ ಪರಿಹಾರ: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಸ್ತೆ ಬದಿಯಲ್ಲಿ ಸಿಕ್ಕಿದ ಪಟಾಕಿಯನ್ನು ಮನೆಗೆ ತಂದು ಅಕಸ್ಮಿಕವಾಗಿ ಸ್ಫೋಟಿಸಿಕೊಂಡು ಗಾಯಗೊಂಡಿದ್ದ ಬಾಲಕನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿಯಾದ ಗೌತಮ್ ಪೂಜಾರಿ ಎಂಬ ಬಾಲಕನು ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಬಿದ್ದಿದ್ದ ಪಟಾಕಿಯೊಂದು ಸಿಕ್ಕಿತ್ತು. ಅದು ಪಟಾಕಿ ಎಂದು ತಿಳಿಯದ ಬಾಲಕನು ಅದನ್ನು ಮನೆಗೆ ತಂದು, ಹುಡಿ ಮಾಡಿ ಬೆಂಕಿ ಕೊಟ್ಟಿದ್ದನು. ಈ ವೇಳೆ ಪಟಾಕಿ ತೀವ್ರವಾಗಿ ಸ್ಫೋಟಗೊಂಡ ಕಾರಣ ಬಾಲಕನ ಕೈ ಬೆರಳುಗಳು ನಷ್ಟವಾಗಿದ್ದವು.

ಬಾಲಕನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆತನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ತಕ್ಷಣವೇ ಸ್ಪಂದಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಿಫಾರಸು ಪತ್ರ ಸಲ್ಲಿಸಿದ್ದರು. ಶಾಸಕರ ವಿಶೇಷ ಮುತುವರ್ಜಿಯ ಮೇರೆಗೆ ಬಾಲಕನ ಚಿಕಿತ್ಸಾ ವೆಚ್ಚಕ್ಕಾಗಿ ಇದೀಗ 1 ಲಕ್ಷ ರೂ. ಪರಿಹಾರ ಧನ ಮಂಜೂರಾಗಿದೆ.

ಗಾಯಾಳು ಬಾಲಕನ ಕುಟುಂಬಕ್ಕೆ ಈ ಆರ್ಥಿಕ ನೆರವು ದೊಡ್ಡ ಆಸರೆಯಾಗಿದ್ದು, ಶಾಸಕರ ಶೀಘ್ರ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Share News