ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಆಶೋಕ್ ರೈ ಎರಡೂ ಕಡೆಯವರ ಮನೆಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ತಿಳಿದಿದ್ದಾರೆ. ಜೊತೆಗೆ ಪ್ರಕರಣ ನಡೆದ ಸ್ಥಳದಲ್ಲಿದ್ದ ಅಂಗಡಿ ವ್ಯಾಪಾರಿಯನ್ನು ಭೇಟಿಯಾಗಿದ್ದಾರೆ.


ಯುವಕ ಹೇಳಿದ್ದೇನು?
ಆರೋಪಿತ ಯುವಕನ ಮನೆಗೆ ಭೇಟಿ ನೀಡಿದ ಅವರು ಸ್ವತಃ ಅವರಿಂದಲೇ ವಾಸ್ತವ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಘಟನೆ ವಿವರಿಸಿದ ಯುವಕ, ತಾನು ತನ್ನ ಕೆಲ ಸ್ನೇಹಿತರ ಜತೆ ಬೆಳಗ್ಗೆ ಪ್ರತಿನಿತ್ಯ ಜಿಮ್‌ಗೆ ಹೋಗುತ್ತಿದ್ದು, ಅಂದೂ ಸಹ ಜಿಮ್‌ಗೆ ತೆರಳುವ ವೇಳೆ ಬ್ರೆಡ್‌ಗಾಗಿ ಜಾಮ್ ತೆಗೆಯಲು ಸ್ಥಳೀಯ ಅಂಗಡಿಯಿಂದ ಸಣ್ಣ ಚೂರಿ ತೆಗೆದುಕೊಂಡು ಹೋಗಿದ್ದೇವೆ. ಈ ವೇಳೆ ಅದೇ ಮಾರ್ಗದಲ್ಲಿ ಯುವತಿ ಬಂದಿದ್ದು, ಅದು ನಮ್ಮ ಗಮನಕ್ಕೆ ಬಂದಿರಲಿಲ್ಲ. ನಾವು ಜಿಮ್‌ಗೆ ಹೋಗಿ ಬಂದ ನಂತರ ಘಟನೆ ಬಗ್ಗೆ ತಿಳಿಯಿತು ಎಂದು ಹೇಳಿದ ಅವರು, ನಾವು ಆಕೆಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಹೇಳಿದರು.
ಸ್ಥಳೀಯ ವ್ಯಾಪಾರಿ ಹೇಳಿದ್ದೇನು?
ನಂತರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿನ ಸ್ಥಳೀಯ ವ್ಯಾಪಾರಿಯನ್ನು ಮಾತನಾಡಿಸಿದರು, ಈ ವೇಳೆ ಮಾಹಿತಿ ಹಂಚಿಕೊಂಡ ಅವರು, ನಾನು 26 ವರ್ಷದಿಂದ ಇಲ್ಲಿ ವ್ಯಾಪಾರಿಯಾಗಿದ್ದೇನೆ. ಮೊದಲು ಯುವಕರು ಬಂದು ಬ್ರೆಡ್ ತೆಗೆದುಕೊಂಡು ಹೋದರು. ನಂತರ ಮತ್ತೆ ಬಂದು ಜಾಮ್ ಮುಚ್ಚಳ ತೆಗೆಯಲು ಚೂರಿ ಬೇಕೆಂದು ಕೇಳಿದಾಗ ನಾನು ಸಣ್ಣ ಚೂರಿ ನೀಡಿದ್ದೇನೆ. ಸ್ವಲ್ಪ ಸಮಯದ ನಂತರ ಅವರು ಆ ಚೂರಿಯನ್ನು ಮತ್ತೆ ಮರಳಿಸಿದರು. ನಂತರ ಒಂದು ಜೀಪ್ ಬಂದು ಅದರಲ್ಲಿ ಅವರೆಲ್ಲರೂ ಜಿಮ್ ಕಡೆ ಹೋದರು. ಕೆಲ ಹೊತ್ತಿನ ನಂತರ ಸ್ಥಳೀಯರೊಬ್ಬರು ನನಗೆ ಫೋನ್ ಮಾಡಿ ನೀವು ಇಂದು ಬೆಳಗ್ಗೆ ಯುವಕರಿಗೆ ಚೂರಿ ನೀಡಿದ್ದೀರಾ ಎಂದು ಕೇಳಿದರು. ಅದಕ್ಕೆ ಹೌದೆಂದೆ ಅದಕ್ಕವರು ನೀವು ಚೂರಿ ನೀಡಿದ್ದು ಸ್ವಲ್ಪ ಸಮಸ್ಯೆಯಾಗಿದೆ ಎಂದರು. ಇದರ ಬಗ್ಗೆ ಸ್ಥಳದಲ್ಲಿ ಏನು ನಡೆಯಿತೆಂದು ಗೊತ್ತಿಲ್ಲ. ನನಗೆ ಗೊತ್ತಿದ್ದಂತೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಜೊತೆಗೆ ಆ ಹುಡುಗಿಯು ನನ್ನ ದೂರದ ಸಂಬಂಧಿಯು ಹೌದು ಎಂದು ಹೇಳಿದರು.

ಯುವತಿಯ ಪೋಷಕರು ಹೇಳಿದ್ದೇನು?
ತನ್ನ ಮಗಳು ಪ್ರತಿನಿತ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದು, ಅಂದೂ ಸಹ ಹೋಗುವ ವೇಳೆ ಅಲ್ಲಿದ್ದ ಯುವಕರು ಇವಳನ್ನು ಉದ್ದೇಶಿಸಿ ಬತ್ತಲ್ ಬತ್ತಲ್ (ಬಂದಳು ಬಂದಳು) ಎಂಬಂತೆ ಮಾತನಾಡಿದ್ದು ಕೇಳಿಸಿದಂತೆ, ಆಗಲೇ ಆಕೆ ಹೆದರಿದ್ದಳು. ಇದೇ ವೇಳೆ ಯುವಕನೊಬ್ಬ ಚಾಕು ಹಿಡಿದು ಅದೇ ವೇಳೆ ಹತ್ತಿರದಿಂದಲೇ ಹೋಗಿದ್ದಾನೆ. ಇದರಿಂದ ಯುವತಿ ಮತ್ತಷ್ಟು ಹೆದರಿದ್ದಾಳೆ. ನಂತರ ಘಟನೆ ಬಗ್ಗೆ ಮನೆಯವರಿಗೆ ತಿಳಿಸಿದ್ದಾಳೆ. ಸಂಜೆ ವೇಳೆಗೆ ಯುವಕರ ಕಡೆಯವರು ಸಂಧಾನಕ್ಕೆ ಕರೆದಿದ್ದಾರೆ. ಸಂಧಾನದ ವೇಳೆ ಸ್ಥಳದಲ್ಲಿದ್ದ ಯುವಕರು ಹಿಂದೆ ನಿಂತು ಹಾಸ್ಯ ಮಾಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಕೆಲ ಪೊಲೀಸರು ತಿಳಿಸಿದ್ದಾರೆ ಅದರಂತೆ ನಾವು ಕಂಪ್ಲೇಟ್ ಕೊಡಲು ಹೋಗಿದ್ದೆವು. ಆಗ ನಮ್ಮನ್ನು ಪೊಲೀಸರು ಗಂಟೆಗಟ್ಟಲೆ ಠಾಣೆಯಲ್ಲಿ ಕೂರಿಸಿದ್ದಾರೆಂದು ಆರೋಪಿಸಿದರು. ಇಂತಹ ಪೊಲೀಸರ ಕ್ರಮ ಸರಿಯಲ್ಲ. ಜೊತೆಗೆ ದೂರು ಕೊಡಲು ಹೋದವರ ವಿರುದ್ಧವೇ ಪ್ರತಿದೂರು ದಾಖಲಾಗಿದ್ದು ನಮಗೆ ಬೇಸರ ತರಿಸಿದೆ ಎಂದು ಅಸಮಾಧಾನ ಹೊರಹಾಕಿದರು.


