DAKSHINA KANNADAHOMELATEST NEWS

ವಿಟ್ಲ: ಜೇಬಿನಿಂದ ಹಣ ಹಾಕಿ ರಸ್ತೆಯ ಗಿಡ ಗಂಟಿಗೆ ಮುಕ್ತಿ: ಸ್ಥಳೀಯಾಡಳಿತ ವಿರುದ್ಧ ಆಕ್ರೋಶ

ವಿಟ್ಲ: ಗಿಡ-ಗಂಟಿಗಳಿಂದ ತುಂಬಿ ಹೋಗಿದ್ದ ಸುಮಾರು 3-4 ಕೀ.ಮೀ ಉದ್ದದ  ರಸ್ತೆಯೊಂದಕ್ಕೆ ಸಾರ್ವಜನಿಕರೇ ತಮ್ಮ ಜೇಬಿನಿಂದ ಹಣ ಹಾಕಿ ರಸ್ತೆ ಸರಿಪಡಿಸಿದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಹಾಗೂ ಕೇಪು ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಸಾರ್ವಜನಿಕರ ಮೂಲ ಸೌಕರ್ಯಕ್ಕೆಂದು ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಕಟ್ಟಿದ ಜನ ಮತ್ತೆ ಅದೇ ಮೂಲ ಸೌಕರ್ಯಗಳಿಗೆ ತಮ್ಮ ಜೇಬಿನಿಂದ ದುಡ್ಡು ಹಾಕಿ ಸರಿಪಡಿಸುವ ಮಟ್ಟಕ್ಕೆ ಸರ್ಕಾರ ಹಾಗೂ ಸ್ಥಳೀಯಾಡಳಿತದ ಅವ್ಯವಸ್ಥೆ ತಂದಿದೆ.

ಬಂಟ್ವಾಳ ತಾಲೂಕಿನ ಕೇಪುಗ್ರಾಮ ಹಾಗೂ ಅಳಿಕೆ ಗ್ರಾಮಕ್ಕೆ ಸೇರಿದ ಮೈರ-ಎರುಂಬು-ಮುಳಿಯ ರಸ್ತೆಯು ಹಲವು ವರ್ಷಗಳಿಂದ ಗಿಡಗಂಟಿಗಳಿಂದ ತುಂಬಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ತೆರಳುವ ವೇಳೆ ರಸ್ತೆಗೆ ತಾಗಿಕೊಂಡಿದ್ದ ಗಿಡಗಂಟಿಗಳಿಂದ ಕಣ್ಣು ಹಾಗೂ ಮುಖಕ್ಕೆ ಏಟು ಮಾಡಿಕೊಂಡಿದ್ದರು. ಈ ಸಮಸ್ಯೆಯು ಹಲವು ಸಮಯದಿಂದಿತ್ತು. ಈ ಹಿಂದಿನ ಅಳಿಕೆ ಗ್ರಾಮಸಭೆಯ ವೇಳೆಯೂ ಸಾರ್ವಜನಿಕರು ರಸ್ತೆ ಸರಿಪಡಿಸುವಂತೆ ಜೊತೆಗೆ ರಸ್ತೆಬದಿಯ ಗಿಡಗಂಟಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಥಳೀಯಾಡಳಿತ ಸೊಪ್ಪು ಹಾಕಿರಲಿಲ್ಲ. ಸದ್ಯ ಈ ಬಗ್ಗೆ ಇಂದು ಸ್ಥಳೀಯ ಮೋಹನ್‌ದಾಸ್‌ ರೈ ಎರುಂಬು ಅವರು “ನಮ್ಮ ಊರು-ನಮ್ಮ ಪ್ರೀತಿ” ಎಂಬ ಹೆಸರಿನಲ್ಲಿ ವಾಟ್ಸಪ್‌ ಗ್ರೂಪ್‌ ರಚಿಸಿ ಸಮಸ್ಯೆ ಬಗ್ಗೆ ವಿವರಿಸಿದ್ದರು. ಜೊತೆಗೆ ಸ್ಥಳೀಯರು ಅದರ ಗಿಡಗಂಟಿ ತೆರೆಯುವ ಸದುದ್ದೇಶದೊಂದಿಗೆ ಮುಂದಾಗಿದ್ದರು. ಇದನ್ನರಿತ ಸ್ಥಳೀಯರು ಅವರೊಂದಿಗೆ ಕೈಜೋಡಿಸಿದ್ದರು. ಜೊತೆಗೆ ಪ್ರತಿಯೊಬ್ಬರು ತಮ್ಮಿಂದಾದ ಧನ ಸಹಾಯ ಮಾಡಲು ಮುಂದಾಗಿದ್ದಾರೆ. ಸದ್ಯ ಕೆಲವು ಕೆಲಸಗಾರರನ್ನು ನೇಮಿಸಿಕೊಂಡು ಮೊದಲಿಗೆ ರಸ್ತೆಯ ಎರಡೂ ಬದಿಯ ಗಿಡಗಂಟಿ ತೆರವುಗೊಳಿಸಲು ಮುಂದಾಗಿದ್ದಾರೆ. ಸದ್ಯ ಇದಕ್ಕೆ ಸ್ಥಳೀಯರ ಬೆಂಬಲವೂ ದೊರಕಿದೆ.

ಮೈರ-ಎರುಂಬು- ಮುಳಿಯ ರಸ್ತೆಯೋ ಗುಂಡಿಯೋ

ಮೈರದಿಂದ ಎರುಂಬು ಮಾರ್ಗವಾಗಿ ಸಂಪರ್ಕಿಸುವ ಮುಳಿಯ ದಾರಿಯು ರಸ್ತೆಯೋ ಗುಂಡಿಯೋ ಎಂದು ಹೇಳತೀರದು. ಮೈರದಿಂದ ಎರುಂಬುವರೆಗಿನ ಕಾಂಕ್ರೀಟಿನ ರಸ್ತೆಯ ಅವ್ಯವಸ್ಥೆಯು ದೇವರೀಗೆ ಪ್ರೀತಿ. ಕಡಿಮೆ ಗುಣಮಟ್ಟದ ಕಾಂಕ್ರೀಟೀಕರಣದ ಪರಿಣಾಮ ರಸ್ತೆಪೂರ್ತಿ ಒಡೆದು ಹೋಗಿದ್ದು,  ಆ ರಸ್ತೆಯಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಮಧ್ಯಭಾಗದಲ್ಲಿ ಈ ವರ್ಷ ಸ್ಥಳೀಯ ವಿಧಾಪರಿಷತ್‌ ಶಾಸಕ ಹಾಗೂ ವಿಧಾನಸಭಾ ಶಾಸಕರ ಅನುದಾನದ ಮೇರೆಗೆ 200 ಮೀಟರ್‌ಗಳ ರಸ್ತೆಯು ನಿರ್ಮಾಣಗೊಂಡಿದೆ. ಇಲ್ಲಿನ ಶಂಕರನಾರಾಯಣ ದೇವಸ್ಥಾನದಿಂದ ಮುಳಿಯ ಸಂಪರ್ಕಿಸುವ ರಸ್ತೆಯು ರೋಡೋ-ತೋಡೋ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ ತೆರಳುವ ದ್ವಿಚಕ್ರ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಈ ರಸ್ತೆಯಲ್ಲಿ ಮಳೆ ನೀರು ರಸ್ತೆ ಬದಿ ಗುಂಡಿ ಬಿಟ್ಟು ರಸ್ತೆಯಲ್ಲೇ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಯಾವುದಕ್ಕೂ ವೋಟು ಕೇಳಲು ಬನ್ನಿ? 

ಕೆಲವೇ ತಿಂಗಳುಗಳಲ್ಲಿ ಗ್ರಾಮಪಂಚಾಯತ್‌ ಚುನಾವಣೆ ಘೋಷಣೆಯಾಗಲಿದೆ. ಈ ವೇಳೆ ಓಟು ಕೇಳಲು ಎರುಂಬು- ಮುಳಿಯ ಕಡೆಗೆ ಬನ್ನಿ ಎಂದು ಸ್ಥಳೀಯರು ಕಾಯುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಕಟ್ಟಿ ಮತ್ತೆ ತಮ್ಮ ಜೇಬಿನಿಂದಲೇ ಮೂಲಸೌಕರ್ಯಗಳಿಗೆ ಹಣ ಖರ್ಚು ಮಾಡುವ ಪರಿಸ್ಥಿತಿ ಸ್ಥಳೀಯಾಡಳಿತ ನಿರ್ಮಿಸಿದೆ. ಈ ಹಿನ್ನೆಲೆ ಸ್ಥಳೀಯರು ಗರಂ ಆಗಿದ್ದು, ಮೂಲಸೌಕರ್ಯಗಳಾದ ರಸ್ತೆ-ನೀರು ಕೊಡಲಾಗದ ಜನಪ್ರತಿನಿಧಿಗಳಿದ್ದರೇನು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಜೊತೆಗೆ ಸ್ಥಳೀಯರು ಈ ಬಾರಿ ಜನಪ್ರತಿನಿಧಿಗಳು ಏನು ಉತ್ತರಿಸುತ್ತಿದ್ದಾರೆಂದು ಕಾದು ನೋಡಬೇಕಾಗಿದೆ.

Share News