canaratvnews

ಪ್ರತಿಮ ಕುಮಾರ್ ಕೆ.ಎಸ್. ಅವರಿಗೆ ಅಮೆರಿಕಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ

ಮಂಗಳೂರು: ಸಮಾಜ ಸೇವಾ ಕ್ಷೇತ್ರದಲ್ಲಿ ಅವರು ಮಾಡಿರುವ ಗಣನೀಯ ಮತ್ತು ನಿಸ್ವಾರ್ಥ ಸಾಧನೆಯನ್ನು ಗುರುತಿಸಿ, ಮಂಗಳೂರಿನ ಪ್ರಮುಖ ಸಾಮಾಜಿಕ ಮತ್ತು ಶೈಕ್ಷಣಿಕ ಮುಖಂಡರಾದ ಶ್ರೀ ಪ್ರತಿಮ ಕುಮಾರ್ ಕೆ. ಎಸ್. ಅವರಿಗೆ ಜಾಗತಿಕ ಮಟ್ಟದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ

ಪಾಂಡಿಚೇರಿಯಲ್ಲಿ ಶನಿವಾರ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಜಾಗತಿಕ ಮಟ್ಟದ ಯುನೈಟೆಡ್ ಅಮೆರಿಕಾ ಯೂನಿವರ್ಸಿಟಿಯು ಈ ಅತ್ಯುನ್ನತ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ

ಶ್ರೀ ಪ್ರತಿಮ ಕುಮಾರ್ ಕೆ.ಎಸ್. ಅವರು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕೃತ ತರಬೇತಿದಾರರಾಗಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ದೇಶಭಕ್ತಿಯನ್ನು ಬಿತ್ತಿ ಬೆಳೆಸುವಲ್ಲಿ ಅವರು ನಿರಂತರ ಶ್ರಮಿಸುತ್ತಿದ್ದಾರೆ.

ಶಿಕ್ಷಣ, ಕ್ರೀಡೆ ಹಾಗೂ ಸಮಾಜ ಸೇವಾ ರಂಗದಲ್ಲಿ ಸಕ್ರಿಯವಾಗಿರುವ ಪ್ರತಿಮ ಕುಮಾರ್ ಅವರಿಗೆ ಜಾಗತಿಕ ಮಟ್ಟದ ಅಕಾಡೆಮಿಕ್ ಗೌರವ ದೊರೆತಿರುವುದಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ಜಿಲ್ಲೆಯ ಸಾಂಸ್ಕೃತಿಕ ಗಣ್ಯರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share News
Exit mobile version