ಬೆಂಗಳೂರು: ಮನೆಗೆಲಸದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಅಪಹರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದೆ. ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ ಏನು?
2024ರ ಲೋಕಸಭೆಗೆ ನಡೆದ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಈ ವೇಳೆ ಸಂಸದನಾಗಿದ್ದ ಪ್ರಜ್ವಲ್‌ನದ್ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವಿಡಿಯೊಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದವು.
ಈ ವಿಡಿಯೊಗಳ ಪೈಕಿ 48 ವರ್ಷದ ಸಂತ್ರಸ್ತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೊ ಕೂಡಾ ಬಿತ್ತರಗೊಂಡಿತ್ತು. ಪ್ರಜ್ವಲ್ ಸ್ವಯಂ ಚಿತ್ರೀಕರಿಸಿದ್ದ ಎನ್ನಲಾದ ಹತ್ತಾರು ಅಶ್ಲೀಲ ವಿಡಿಯೊ ಗಳು ವ್ಯಾಪಕವಾಗಿ ಬಿತ್ತರಗೊಂಡು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ ಹಾಲಿ ಪ್ರಕರಣದ ಸಂತ್ರಸ್ತೆ, ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು.
ಈ ವೇಳೆ ಸಂತ್ರಸ್ತೆಯ ಪುತ್ರ 2024ರ ಮೇ 2ರಂದು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ಪ್ರಜ್ವಲ್ ತಂದೆಯೂ ಆಗಿರುವ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಬಂಧಿ ಸತೀಶ್ ಬಾಬಣ್ಣ ವಿರುದ್ಧ ‘ನನ್ನ ತಾಯಿಯ ಅಪಹರಣ ಮಾಡಲಾಗಿದೆ’ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಕ್ರಿಮಿನಲ್ ದೂರು ದಾಖಲಿಸಿ ಕೊಂಡು ಪ್ರಕರಣವನ್ನು ಭೇದಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಸಂತ್ರಸ್ತೆಯು ತೋಟದ ಮನೆಯೊಂದರಲ್ಲಿ ಇದ್ದ ಜಾಡನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯು, ‘ಪ್ರಜ್ವಲ್ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಅತ್ಯಾಚಾರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಎಫ್‌ಐಆರ್ ದಾಖಲಾಗಿತ್ತು.
ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ನಿನ್ನೆ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದ್ದಾರೆ. ಇಂದು ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಏನು? ಎಷ್ಟು? ಎಂಬುದನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ.