ಮಂಗಳೂರು,: ಜನಸೇವೆಗೆ ಅಧಿಕಾರ ಅತ್ಯಗತ್ಯ. ನನಗೆ ದೊರೆತಿರುವ ಈ ಅಧಿಕಾರವನ್ನು ಜನರ ಕಲ್ಯಾಣಕ್ಕಾಗಿ ಮತ್ತು ಅವರ ಕೆಲಸಗಳಿಗಾಗಿ ಬಳಸುತ್ತೇನೆಯೇ ಹೊರತು ವೈಯಕ್ತಿಕ ಹಿತಾಸಕ್ತಿಗಲ್ಲ” ಎಂದು ನೂತನ ವಿಧಾನಪರಿಷತ್ ಸದಸ್ಯರಾದ ಪಿ.ವಿ. ಮೋಹನ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜಕೀಯ ಆದರ್ಶಗಳ ಹಾದಿ: “ನಾನು ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಅವರಂತಹ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ರಾಜಕೀಯ ಆದರ್ಶಗಳನ್ನು ಪಾಲಿಸುತ್ತಾ ಬೆಳೆದವನು. ಇಂದಿನ ರಾಜಕೀಯ ಪರಿಸ್ಥಿತಿ ಏನೇ ಇದ್ದರೂ, ನಾನು ಸದಾ ಜನರ ಪರವಾಗಿ ಕೆಲಸ ಮಾಡುತ್ತೇನೆ. ಪಕ್ಷಕ್ಕಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ನಂತರ ನನಗೆ ಈ ಅಧಿಕಾರದ ಜವಾಬ್ದಾರಿ ಸಿಕ್ಕಿದೆ. ಇದನ್ನು ಪಕ್ಷ ನನಗೆ ನೀಡಿದ ಉಡುಗೊರೆ ಎಂದು ಭಾವಿಸುತ್ತೇನೆ. ನನ್ನ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಶಕ್ತಿ ತುಂಬಬೇಕು” ಎಂದು ಅವರು ಮನವಿ ಮಾಡಿದರು.
ಭಾವೈಕ್ಯತೆಯಿಂದ ಮುಂಬರುವ ಚುನಾವಣೆಯಲ್ಲಿ ಜಯ: “ದಕ್ಷಿಣ ಕನ್ನಡ ಜಿಲ್ಲೆಯ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬೇಕಾದರೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಭಾವೈಕ್ಯತೆ ಅತ್ಯಗತ್ಯ. ಇದನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ತನ್ನದೇ ಆದ ಗೌರವ ಮತ್ತು ಬೆಲೆ ಇದೆ. ಪಕ್ಷವು ತಾಯಿಯಿದ್ದಂತೆ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಸ್ಥಾನಮಾನವನ್ನು ಖಂಡಿತವಾಗಿಯೂ ನೀಡುತ್ತದೆ” ಎಂದರು.
ತಳಮಟ್ಟದ ಸಂಘಟನೆಗೆ ಕರೆ: “ಕೇರಳದಲ್ಲಿ ಎಸ್‌ಐಆರ್ (SIR) ಗೆದ್ದ ಮಾದರಿಯಲ್ಲೇ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ನಾವು ಯಶಸ್ಸು ಸಾಧಿಸಬೇಕಾಗಿದೆ. ಇದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಇದಕ್ಕಾಗಿ ಕಾರ್ಯಕರ್ತರು ಇಂದಿನಿಂದಲೇ ತಳಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು” ಎಂದು ಪಿ.ವಿ. ಮೋಹನ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೊ, ವಿವಿಧ ನಿಗಮಗಳ ಅಧ್ಯಕ್ಷರಾದ ಮಮತಾ ಗಟ್ಟಿ ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್‌ದಾಸ್, ಮಾಜಿ ಮೇಯರ್‌ಶಶಿಧರ ಹೆಗ್ಡೆ ಪದ್ಮರಾಜ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಲುಕ್ಖಾನ್, ಸುಭಾಷ್, ಡೆನ್ನಿಸ್, ನವಾಜ್, ಚಿತ್ತರಂಜನ್, ಜೋಕಿಂ, ದಿನೇಶ್, ಮನೋರಾಜ್ ರಾಜೀವ್, ಜೇಬಾ ಸುಬೋದ್ ಆಳ್ವ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.